Home ಟಾಪ್ ಸುದ್ದಿಗಳು ಹೈಕೋರ್ಟ್ ಚಾಟಿ ಬೀಸಿದ್ದರೂ, ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ: ರಾಮಲಿಂಗಾ ರೆಡ್ಡಿ

ಹೈಕೋರ್ಟ್ ಚಾಟಿ ಬೀಸಿದ್ದರೂ, ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಹೈಕೋರ್ಟ್ ಸೂಚನೆ ಹೊರತಾಗಿಯೂ ಸರ್ಕಾರ ಹಾಗೂ ಬಿಬಿಎಂಪಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವಲ್ಲಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಮೊನ್ನೆ ಶಾಲಾ ಶಿಕ್ಷಕಿ ಕೂಡ ರಸ್ತೆ ಗುಂಡಿಗೆ ಬಲಿಯಾಗಿದ್ದು, ಇದುವರೆಗೂ 9 ಜನ ಬಲಿಯಾಗಿದ್ದಾರೆ. ಈ ಹಿಂದೆಯೂ ರಸ್ತೆ ಗುಂಡಿಗೆ ಜನ ಪ್ರಾಣ ಬಿಟ್ಟಿದ್ದರೂ ಬೆಂಗಳೂರು ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರಸ್ತೆಗುಂಡಿಯಿಂದ ಸಾವು ಆಗಿರಲಿಲ್ಲ. ಹೈಕೋರ್ಟ್ ಚಾಟಿ ಬೀಸಿದ್ದರೂ, ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್ ಗಳನ್ನು ಜೈಲಿಗೆ ಹಾಕುತ್ತೇವೆ ಎಂದಿದ್ದರೂ ಇದುವರೆಗೂ ರಸ್ತೆಗುಂಡಿ ಮುಚ್ಚಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ  ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 7-8 ಮಂತ್ರಿಗಳಿದ್ದು, ಸಿಎಂ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರು ಉಸ್ತುವಾರಿ ವಹಿಸಿರುವುದರಿಂದ ಹಣಕಾಸಿಗೆ ತೊಂದರೆ ಇಲ್ಲ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಈ ರೀತಿ ಆಗುತ್ತಿಲ್ಲ. ಸಚಿವ ಆರ್.ಅಶೋಕ್ ಅವರು ಹೇಳಿದಂತೆ ಸೆಪ್ಟೆಂಬರ್ ಒಳಗೆ 1332 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳು, ಹಾಗೂ ಸೆಪ್ಟೆಂಬರ್ 30ರ ಒಳಗೆ ವಾರ್ಡ್ ಮಟ್ಟದಲ್ಲಿ 85,791 ಕಿ.ಮೀ ಉದ್ದದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು. ಆದರೆ ರಸ್ತೆ ಗುಂಡಿ ಮಾತ್ರ ಹಾಗೆಯೇ ಇದೆ ಎಂದು ಟೀಕಿಸಿದರು.

ಇನ್ನು ಬಿಬಿಎಂಪಿ ಬೆಂಗಳೂರು ನಗದರಲ್ಲಿ 194 ರಸ್ತೆ ಗುಂಡಿ ಎಂದು ಹೇಳುತ್ತಾರೆ. ಅಧಿಕಾರಿಗಳು ಹಾಗೂ ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲ.  ಇಂದು ಕೂಡ ಬೆಂಗಳೂರು ರಸ್ತೆಯಲ್ಲಿ ಗುಂಡಿಗಳು ಹಾಗೇ ಇವೆ. ಇಷ್ಟು ಹೊತ್ತಿಗೆ ಗುಂಡಿ ಮುಚ್ಚುವ ಕಾರ್ಯ ಮುಗಿಯಬೇಕಿತ್ತು. ಎರಡು ತಿಂಗಳಿನಿಂದ ಮಳೆ ಇಲ್ಲ, ಹೀಗಾಗಿ ರಸ್ತೆಗಳ ಡಾಂಬರೀಕರಣ ಮಾಡಬಹುದಾಗಿತ್ತು. ಆದರೆ ಸರ್ಕಾರಕ್ಕೆ ಹಾಗೂ ಪಾಲಿಕೆಗೆ ರಸ್ತೆ ಗುಂಡಿ ಮುಚ್ಚುವ ಹಾಗೂ ಡಾಂಬರಿಕರಣ ಮಾಡುವ ಇಚ್ಛಾಶಕ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಹನಗರ ಪಾಲಿಕೆಯ 198 ವಾರ್ಡ್ ಗಳಿಗೆ 2020-21ನೇ ಸಾಲಿನಲ್ಲಿ ಒಂದು ರೂಪಾಯಿಯೂ ಅನುದಾನ ಬಿಡುಗಡೆಯಾಗಲಿಲ್ಲ. ಇನ್ನು 2021-22ನೇ ಸಾಲಿನಲ್ಲಿ 60 ಲಕ್ಷ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದು, ಇದುವರೆಗೂ ಅದು ಕೋಡ್ ಆಗದೇ ಬಿಡುಗಡೆಯಾಗಿಲ್ಲ. ಅಲ್ಲಿಗೆ ಎರಡು ವರ್ಷಗಳ ಬಜೆಟ್ ನಲ್ಲಿ ಸರ್ಕಾರ ಬೆಂಗಳೂರಿಗೆ ಕೊಡುತ್ತೇವೆ ಎಂದಿದ್ದು ಕೇವಲ 60 ಲಕ್ಷ. ಅದು ಕೂಡ ಇನ್ನು ಬಂದಿಲ್ಲ. ಪಾಲಿಕೆಗೆ ಹಣ ನೀಡದೆ ಸರ್ಕಾರ ಗುಂಡಿ ಮುಚ್ಚಿ ಎಂದರೆ ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಎಲ್ಲ ಕಾಮಗಾರಿ ಕೆಲಸಗಳು ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 7 ಸಾವಿರ ಕೋಟಿ ಹಾಗೂ ಕುಮಾರಸ್ವಾಮಿ ಸರ್ಕಾರ 1 ಸಾವಿರ ಕೋಟಿ ಕೊಟ್ಟಿದ್ದ ಹಣದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಈ ಹಿಂದಿನ ಸರ್ಕಾರ ನೀಡಿದ್ದ ಹಣವನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡು ಈ ಕೆಲಸಗಳನ್ನು ಮಾಡುತ್ತಿದೆ. ಈ ಸರ್ಕಾರ ಇದುವರೆಗೂ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ. ಮೊನ್ನೆಯಷ್ಟೇ 1500 ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರ ಹೇಳಿದ್ದು, ಇನ್ನು ಬಿಡುಗಡೆಯಾಗಿಲ್ಲ. ಈ ಸರ್ಕಾರದಿಂದ ಬೆಂಗಳೂರು ನಗರಕ್ಕೆ ಶೂನ್ಯ ಕೊಡುಗೆ ಕೊಟ್ಟಿದೆ. ಆದರೆ ಪ್ರಚಾರ ಪಡೆಯಲು ನವ ಬೆಂಗಳೂರು ಮಾಡುತ್ತೇವೆ ಅದಕ್ಕಾಗಿ ವರ್ಷಕ್ಕೆ 3 ಸಾವಿರ ಕೋಟಿಯಂತೆ 6 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಹಣ ಬಂದು ಕೆಲಸ ಆರಂಭವಾಗುವುದಕ್ಕೆ ಕನಿಷ್ಠ ಪಕ್ಷ ಇನ್ನು ಎರಡು ವರ್ಷಗಳು ಬೇಕಾಗುತ್ತವೆ. ಬಿಬಿಎಂಪಿಯಿಂದ ಸರ್ಕಾರಕ್ಕೆ ಫೈಲ್ ಗಳು ಹೋದರೆ ಆರು ತಿಂಗಳಾದರೂ ಅದು ಮುಂದಕ್ಕೆ ಹೋಗುವುದಿಲ್ಲ. ನನ್ನ ಕ್ಷೇತ್ರದ ಫೈಲ್ ಗಳು ವಿಧಾನಸೌಧದಲ್ಲಿ ಕಳೆದ ಆರು ತಿಂಗಳಿನಿಂದ ಗೆದ್ದಲು ಹಿಡಿಯುತ್ತಿವೆ.  ರಸ್ತೆಗುಂಡಿಯನ್ನು ಮುಚ್ಚಿಸದೇ ಇನ್ನು ಎಷ್ಟು ಜನರ ಬಲಿ ಪಡೆಯಲು ಸರ್ಕಾರ ಹಾಗೂ ಪಾಲಿಕೆ ತೀರ್ಮಾನಿಸಿದೆಯೋ ಗೊತ್ತಿಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಿದ್ದರೆ ಇದನ್ನು ಇಷ್ಟುಹೊತ್ತಿಗೆ ಮಾಡಬಹುದಾಗಿತ್ತು ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ನಾವು ಈ ವಿಚಾರವಾಗಿ ಈಗಾಗಲೇ ಆಯುಕ್ತರು ಹಾಗೂ ಸರ್ಕಾರದ ಗಮನಕ್ಕೆ ಈ ಬಗ್ಗೆ ಮಾಹಿತಿ ನೀಡಿದರೂ ಯಾರೂ ಎಚ್ಛೆತ್ತುಕೊಂಡಿಲ್ಲ. ಹೀಗಾಗಿ ಸರ್ಕಾರ ಹಾಗೂ ಪಾಲಿಕೆ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಶನಿವಾರ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರ ಪ್ರತಿಭಟನೆಗೆ ಅವಕಾಶ ಕೊಟ್ಟರೆ ಹೆಚ್ಚಿನ ಜನ ಸೇರಿ ಪ್ರತಿಭಟನೆ ಮಾಡುತ್ತೇವೆ. ಅನುಮತಿ ನೀಡದಿದ್ದರೆ ಸಂಕೇತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿರು.

 ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು  ಜಿಲ್ಲಾಧ್ಯಕ್ಷರುಗಳಾದ ಎಂ. ರಾಜಕುಮಾರ್, ಜಿ ಶೇಖರ್, ಜಿ ಕೃಷ್ಣಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ರಮೇಶ್, ಮಾಜಿ ಮಹಾಪೌರರಾದ ರಾಮಚಂದ್ರಪ್ಪ,  ಮಂಜುನಾಥ ರೆಡ್ಡಿ, ಸಂಪತ್ ರಾಜ್, ಮಾಜಿ ಶಾಸಕ ಚಂದ್ರಶೇಖರ್, ಹಾಗೂ ಇತರೆ ನಾಯಕರು ಉಪಸ್ಶಿತರಿದ್ದರು.

Join Whatsapp
Exit mobile version