Home ಕರಾವಳಿ ದಕ್ಷಿಣ ಕನ್ನಡ: ಪ್ರಾಣಿ ದೌರ್ಜನ್ಯ ತಡೆಗಟ್ಟಲು ಎಸಿಪಿ/ಮೇಲಿನ ಹುದ್ದೆಯ ಅಧಿಕಾರಿ ನಿಯೋಜನೆಗೆ ಜಿಲ್ಲಾಧಿಕಾರಿ ಸೂಚನೆ

ದಕ್ಷಿಣ ಕನ್ನಡ: ಪ್ರಾಣಿ ದೌರ್ಜನ್ಯ ತಡೆಗಟ್ಟಲು ಎಸಿಪಿ/ಮೇಲಿನ ಹುದ್ದೆಯ ಅಧಿಕಾರಿ ನಿಯೋಜನೆಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ ಪ್ರಾಣಿಗಳ ಹಿಂಸೆಯನ್ನು ತಡೆಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಪ್ರಾಣಿಗಳ ದೌರ್ಜನ್ಯದ ದೂರನ್ನು ಪೊಲೀಸ್ ಸಹಾಯವಾಣಿ 112 ರಲ್ಲಿ ದಾಖಲಿಸಬೇಕು, ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಸಿಪಿ ಅಥವಾ ಅದಕ್ಕೂ ಮೇಲಿನ ಹುದ್ದೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದರು.

ಪಿಂಜಾರಪೋಲ್ ಮತ್ತು ಇತರ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಸಹಾಯಧನ ಕೋರಿ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ 9 ಗೋಶಾಲೆಗಳಿಗೆ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಅನುದಾನ ಶಿಫಾರಸ್ಸು ಮಾಡಲಾಯಿತು. ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮೇ.23ರ ಸೋಮವಾರ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ಶಿಫಾರಸ್ಸು ಮಾಡಲಾಯಿತು.


ರಾಜ್ಯ ಸರ್ಕಾರದ ಆದೇಶದಂತೆ ಸರ್ಕಾರಿ ಜಿಲ್ಲಾ ಗೋಶಾಲೆ ಸ್ಥಾಪನೆಗೆ ಕಡಬ ತಾಲೂಕು ರಾಮಕುಂಜ ಗ್ರಾಮದಲ್ಲಿ ಸ್ಥಳ ಗುರುತಿಸಲಾಗಿದ್ದು, ಮೊದಲ ಹಂತದ ಕಾಮಗಾರಿಗಳಿಗೆ 36 ಲಕ್ಷ ರೂ.ಗಳಿಗೆ ಅನುಮೋದನೆ ನೀಡಲಾಗಿದೆ, ಈಗಾಗಲೇ ಮೊದಲ ಹಂತದ ಕಾಮಗಾರಿಗಳಿಗೆ ಪ್ರಾರಂಭವಾಗಿದ್ದು, 2 ಬೋರ್ ವೆಲ್ಗಳನ್ನು ಕೊರೆಯಿಸಲಾಗಿದ್ದು, ಉತ್ತಮ ನೀರು ದೊರಕಿದೆ. ಗೋಶಾಲೆ ಸುತ್ತ ಚೈನ್ ಲಿಂಕ್ ಬೇಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ, ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗೋಶಾಲೆಗೆ ಕೊಟ್ಟಿಗೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದೆಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್ ಸಭೆಗೆ ಮಾಹಿತಿ ನೀಡಿದರು.


ಪೊಲೀಸ್ ಹಾಗು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಪ್ರಾಣಿ ಹಿಂಸೆ ತಡೆ ಕಾಯಿದೆಗಳ ಬಗ್ಗೆ ಅರಿವು ಮೂಡಿಸಲು ಕೂಡಲೇ ಒಂದು ಕಾರ್ಯಾಗಾರವನ್ನು ಏರ್ಪಡಿಸುವಂತೆ ಸೂಚಿಸಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಅಧೀನದಲ್ಲಿರುವ ಕಸಾಯಿ ಖಾನೆಗೆ ಸಿಸಿ ಟಿವಿ ಅಳವಡಿಸುವಂತೆ ಹಾಗೂ ಕಸಾಯಿ ಖಾನೆಗೆ ಬರುವ ವಾಹನಗಳ ಸಂಖ್ಯೆಯನ್ನು ರಿಜಿಸ್ಟ್ರಾರ್ ಪುಸ್ತಕದಲ್ಲಿ ನಿರ್ವಹಿಸಲು ತಿಳಿಸಿದರು.


ಕಾನೂನಿನಲ್ಲಿ ನಿಷೇಧವಾಗಿರುವ ಏರ್ ಗನ್ ಗಳನ್ನು ಅಕ್ರಮವಾಗಿ ಇಟ್ಟುಕೊಂಡು ಅದನ್ನು ಪ್ರಾಣಿ ಮತ್ತು ಪಕ್ಷಿಗಳಿಗೆ ಹಿಂಸೆ ನೀಡುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ, ಅದನ್ನು ತಡೆಗಟ್ಟುವಂತೆ ಶಶಿಧರ ಶೆಟ್ಟಿ ಜಿಲ್ಲಾಧಿಕಾರಿಯವರನ್ನು ಕೋರಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ನಿಷೇಧಿತ ಏರ್ ಗನ್ ಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಕಟುನಿಟ್ಟಿನ ಸೂಚನೆ ನೀಡಿದರು.


ಮಂಗಳೂರು ನಗರದ ಪಣಂಬೂರು ವ್ಯಾಪ್ತಿಯಲ್ಲಿ ಬೀಡಾಡಿ ಜಾನುವಾರುಗಳ ರಕ್ಷಣೆ ಮತ್ತು ನಿರ್ವಹಣೆಗೆ ಅಗತ್ಯವಿರುವ ಸ್ಥಳ ಒದಗಿಸುವಂತೆ ಕೋರಿ ಎನ್ ಎಂಪಿಟಿಯವರಿಗೆ ಪತ್ರಮುಖೇನ ಕೋರಲಾಗಿದೆ, ಸರ್ಕಾರದ ಆದೇಶದಂತೆ ತಾಲೂಕಿಗೊಂದು ಗೋಶಾಲೆ ತೆರೆಯಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಈ ಹಿಂದೆ ತಿಳಿಸಿರುವಂತೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಗೋಶಾಲೆ ತೆರೆದಲ್ಲಿ ನಿರ್ವಹಣೆ ಸುಲಭವಾಗುವುದರಿಂದ ಗೋಶಾಲೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಜಿಲ್ಲಾಡಳಿತದಿಂದ ನೀಡಲು ಕಮವಹಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.


ಗೋಶಾಲೆಗಳನ್ನು ವಿಶಿಷ್ಟವಾಗಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಸ್ಥಳ ಪರಿಶೀಲಿಸಿ ವರದಿ ನೀಡಲು ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ ಅವರು, ಜಾನುವಾರುಗಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡುವುದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮವಹಿಸಲಾಗುತ್ತಿದೆ, ಅನಧಿಕೃತ ಜಾನುವಾರು ಸಾಗಾಣಿಕೆಯಲ್ಲಿ ದಾಖಲಾದ ಪ್ರಕರಣಗಳನ್ನು ಕ್ರೋಢೀಕರಿಸಿ ಪ್ರತಿ ಮಾಹೆ ವರದಿ ನೀಡುವಂತೆ ಅವರು ಪೊಲೀಸರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲು ಸಂಘದ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಗಿದ್ದು, ಸರ್ಕಾರೇತರ ಸಂಸ್ಥೆಯಿಂದ ಉಪಾಧ್ಯಕ್ಷರಾಗಿ ಎಚ್. ಶಶಿಧರ ಶೆಟ್ಟಿ, ಪ್ರಾಣಿ ಕಲ್ಯಾಣ ಚಟುವಟಿಕೆಯಡಿ ಸುಮಾ ಆರ್ ನಾಯಕ್, ಚಾಲ್ರ್ಸ್ ಇಮ್ಯಾನುವಲ್ ಪಾವ್ಲ್, ಸಾಮಾನ್ಯ ಸದಸ್ಯರಾಗಿ ಕಟೀಲ್ ದಿನೇಶ್ ಪ್ರೈ. ಡಾ. ಯಶಸ್ವಿ ನಾರಾವಿ ಹಾಗೂ ಸರ್ಕಾರೇತರ ಗೋಶಾಲೆ ಪ್ರತಿನಿಧಿಯಾಗಿ ಶಿವಾನಂದ ಮಂಡನ್ ಮತ್ತು ಸುಬ್ರಹ್ಮಣ ಕುಮಾರ್ ಆಯ್ಕೆಯಾದರು.


ಪ್ರಾಣಿಗಳ ಮೇಲಿನ ಹಿಂಸೆ ಮತ್ತು ಕ್ರೌರ್ಯ ತಡೆಗಟ್ಟಲು ಅಗತ್ಯ ಕಾನೂನು ಸಲಹೆಗಳಿಗಾಗಿ ಸುಮಾ ಆರ್ ನಾಯಕ್ ಅವರನ್ನು ಪ್ರಾಣಿ ಕಲ್ಯಾಣ ವಾರ್ಡನ್ ಆಗಿ ನೇಮಕ ಮಾಡಲಾಯಿತು. ಪೊಲೀಸ್ ಇಲಾಖೆಯ ಅಧಿಕಾರಿಗಳು, ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.

Join Whatsapp
Exit mobile version