ಶ್ರೀರಂಗಪಟ್ಟಣ : ಪರಿಶಿಷ್ಟರಿಗೆ ಕ್ಷೌರ ಮಾಡಲು ಕೇಳಿಕೊಂಡ ಕಾರಣಕ್ಕೆ ವಿವಿಧೆಡೆ ಸಾಮೂಹಿಕ ಬಂದ್ ಮಾಡಿರುವ ಬಗ್ಗೆ ವರದಿಯಾಗಿದೆ.
ಮಹದೇವಪುರ ಹಾಗೂ ಅಕ್ಕಪಕ್ಕದ ಊರುಗಳ 10 ಕ್ಷೌರದ ಅಂಗಡಿಗಳನ್ನು ಕ್ಷೌರಿಕರು ಸಾಮೂಹಿಕವಾಗಿ ಬಂದ್ ಮಾಡಿದ್ದಾರೆ.
ಮಹದೇವಪುರದ 7, ಅಕ್ಕಪಕ್ಕದ ಊರುಗಳಲ್ಲಿನ 3 ಅಂಗಡಿಗಳು ಕಳೆದ 20 ದಿನಗಳಿಂದ ಮುಚ್ಚಿವೆ. ಇದರಿಂದಾಗಿ ಗ್ರಾಮದ ಜನರು ಕ್ಷೌರಕ್ಕಾಗಿ ಅರಕೆರೆ, ಮಂಡ್ಯಕೊಪ್ಪಲು ವೃತ್ತ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳುತ್ತಿದ್ದಾರೆ.
ಗ್ರಾಮದ ಜನರು ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ ಅವರ ಬಳಿ, ಮಹದೇವಪುರದಲ್ಲಿ ನಮಗೆ ಕ್ಷೌರ ಮಾಡುತ್ತಿಲ್ಲ ಎಂದು ದೂರು ನೀಡಿದ್ದರು. ನಂತರ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಈ ಬಗ್ಗೆ ಅರಕೆರೆ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದರು.
ಗ್ರಾಮಕ್ಕೆ ತೆರಳಿದ್ದ ಪೊಲೀಸರು ಕ್ಷೌರ ಮಾಡುವಂತೆ ಮನವೊಲಿಸಲು ಯತ್ನಿಸಿದ್ದರು. ಇದಕ್ಕೆ ಒಪ್ಪದ ಕ್ಷೌರಿಕರು ಅಂಗಡಿಗಳನ್ನೇ ಬಂದ್ ಮಾಡಿದ್ದಾರೆ.
‘ಮಹದೇವಪುರದ ಕ್ಷೌರಿಕರು ಪರಿಶಿಷ್ಟರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ಬಹಿರಂಗವಾಗಿ ಅಸ್ಪೃಶ್ಯತೆ ಆಚರಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಆರೋಪಿಸಿದರು.
ನ.14ರಂದು ಗ್ರಾಮಕ್ಕೆ ಬಂದ ಸಿಪಿಐ ಪುನೀತ್ ಅವರು ಪರಿಶಿಷ್ಟರಿಗೆ ಕ್ಷೌರ ಮಾಡಿಸಿದ್ದರು. ಮರುದಿನದಿಂದ ಅಂಗಡಿಗಳು ಮತ್ತೆ ಬಂದ್ ಆಗಿವೆ.
‘ದೂರು ಬಂದ ಬಳಿಕ ಗ್ರಾಮಕ್ಕೆ ತೆರಳಿ ಪರಿಶಿಷ್ಟರಿಗೆ ಕ್ಷೌರ ಮಾಡಿಸಿದ್ದೆ. ಮತ್ತೆ ಈಗ ಆ ಅಂಗಡಿಗಳು ಮುಚ್ಚಿವೆ ಎಂಬ ಮಾಹಿತಿ ಬಂದಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಅರಕೆರೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್‌ಗೆ ತಿಳಿಸಿದ್ದೇನೆ’ ಎಂದು ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ ಪ್ರತಿಕ್ರಿಯಿಸಿದರು.