Home ಟಾಪ್ ಸುದ್ದಿಗಳು ಮತೀಯ ಗೂಂಡಾಗಿರಿ ಸಮರ್ಥನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೋಟಿಸ್

ಮತೀಯ ಗೂಂಡಾಗಿರಿ ಸಮರ್ಥನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೋಟಿಸ್

(ಕೃಪೆ”: ದಿ ಫೈಲ್.ಇನ್)

ಬೆಂಗಳೂರು; ಮತೀಯ ಗೂಂಡಾಗಿರಿ ಕುರಿತು ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ ಎಂದು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ ನೋಟೀಸ್ ಜಾರಿಗೊಳಿಸಿದೆ.


ಮತೀಯ ಗೂಂಡಾಗಿರಿ ಕುರಿತು ಮುಖ್ಯಮಂತ್ರಿ ಹೇಳಿಕೆ ನೀಡುವ ಮೂಲಕ ಅವರು ಮುಖ್ಯಮಂತ್ರಿಯಾಗಿ ಮಾಡಿದ ಪ್ರಮಾಣಕ್ಕೆ ವಿರುದ್ಧವಾಗಿದೆ ಮತ್ತು ಇದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಕೀಲರ ಸಂಘಟನೆಯು ನೋಟೀಸ್ ನಲ್ಲಿ ತಿಳಿಸಿದೆ.
ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಅವರು ಮಾಡಿದ ಪ್ರಮಾಣಕ್ಕೆ ವಿರುದ್ಧವಾಗಿದೆ, ಇದು ಸಂವಿಧಾನದ ಉಲ್ಲಂಘನೆಯಾಗಿದೆ ಹಾಗು ಸರ್ವೋಚ್ವ ನ್ಯಾಯಾಲಯ ಅಂತರ್ ಜಾತಿ ಹಾಗು ಅಂತರ್ ಧರ್ಮ ವಿವಾಹಗೊಂಡವರ ರಕ್ಷಣೆ ಬಗ್ಗೆ ನೀಡಿ ತೀರ್ಪುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗಾಗಿ ನೋಟೀಸ್ ನೀಡಲಾಗಿದೆ,’ ಎಂದು ವಿವರಣೆ ನೀಡಿದೆ.


ಹೇಳಿಕೆ ಹಿಂಪಡೆಯಿರಿ
ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಯವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಅಲ್ಲದೆ ಈ ಕುರಿತು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿರುವ ಸಂಘಟನೆಯು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನೋಟೀಸ್ ನಲ್ಲಿ ತಿಳಿಸಿದೆ.


ಹಾಗೆಯೇ ಸರ್ವೋಚ್ಚ ನ್ಯಾಯಾಲಯವು ಶಕ್ತಿವಾಹಿಣಿ ಹಾಗು ತೆಹ್ಸೀನ್ ಪೂನಾವಾಲ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿರುವುದು ನೋಟೀಸ್ ನಿಂದ ತಿಳಿದು ಬಂದಿದೆ.


ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗುತ್ತದೆ. ಪರಸ್ಪರರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅನೈತಿಕ ಪೊಲೀಸ್ ಗಿರಿ ಘಟನೆಗಳ ಕುರಿತು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಅವರು, ‘ಸಾಮಾಜಿಕ ಸಾಮರಸ್ಯ ಕಾಪಾಡಲು ನಾವೆಲ್ಲರೂ ಪ್ರಯತ್ನ ಪಡಬೇಕು. ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯೂ ಇದೆ ಎಂದಿದ್ದರು.


ಮತೀಯ ಗೂಂಡಾಗಿರಿ ಕುರಿತು ‘ಕ್ರಿಯೆ ನಡೆದಾಗ ಪ್ರತಿಕ್ರಿಯೆ ಬರುವುದು ಸಹಜ’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕು ಎಂದು ಹಲವರು ಆಗ್ರಹಿಸಿದ್ದರು.
ಅದೇ ರೀತಿ ‘ಮತೀಯ ಗೂಂಡಾಗಿರಿ ನಡೆಸುತ್ತಿರುವ ಜನರನ್ನು ಬೆಂಬಲಿಸಿ ಖುದ್ದು ಮುಖ್ಯಮಂತ್ರಿಯವರೇ ನೀಡಿರುವ ಹೇಳಿಕೆಯು ಮುಂದಿನ ದಿನಗಳಲ್ಲಿ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಲಿದೆ. ಇದಕ್ಕೆ ಮುಖ್ಯಮಂತ್ರಿಯವರ ಬೆಂಬಲವಿದೆ ಎಂದು ಇನ್ನೂ ದೊಡ್ಡ ಸಂಖ್ಯೆಯಲ್ಲಿ ಅಂತಹ ಕೃತ್ಯಗಳು ನಡೆಯುವ ಅಪಾಯವಿದೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು.


ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ವಕ್ತಾರೆ ಲಾವಣ್ಯಾ ಬಲ್ಲಾಳ್, ‘ರಾಜ್ಯದ ಮುಖ್ಯಮಂತ್ರಿಯೇ ಮತೀಯ ಗೂಂಡಾಗಿರಿಯನ್ನು ಬೆಂಬಲಿಸಿದ್ದಾರೆ. ಉಳಿದವರಿಂದ ಇನ್ನು ಏನನ್ನು ನಿರೀಕ್ಷಿಸಬಹುದು? ರಾಜ್ಯದ ಜನರೇ ದಯವಿಟ್ಟು ಸುರಕ್ಷಿತವಾಗಿರಿ. ಸರ್ಕಾರ ನಿಮ್ಮನ್ನು ರಕ್ಷಿಸುತ್ತದೆ ಎಂದು ಬಯಸಬೇಡಿ’ ಎಂದು ಹೇಳಿದ್ದರು.
ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಕೆಲಸ. ಈ ಮಾತಿನಿಂದ ಮತೀಯವಾದಿಗಳು ಪ್ರಚೋದಿತರಾಗಿ ಬೀದಿಗಿಳಿಯವುದು ಖಚಿತ. ಈ ಮಾತಿಗಾಗಿ ಬೊಮ್ಮಾಯಿ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಡಿವೈಎಫ್ ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದರು.
ಇದೊಂದು ದುರದೃಷ್ಟಕರ ಬೆಳವಣಿಗೆ. ಇಂತಹ ಕೃತ್ಯಗಳನ್ನು ಮುಖ್ಯಮಂತ್ರಿಯೇ ಬೆಂಬಲಿಸಿದ್ದಾರೆ. ‘ಅನೈತಿಕ ಪೊಲೀಸ್ ಗಿರಿ’ ಹೆಸರಿನಲ್ಲಿ ನಡೆಯುವ ಗುಂಪು ಹಲ್ಲೆಯನ್ನು ಸಾಮಾನ್ಯ ಎಂಬಂತೆ ಬಿಂಬಿಸುತ್ತಿದ್ದಾರೆ’ ಎಂದು ಜೆಡಿಎಸ್ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಪ್ರತಾಪ್ ಕಣಗಲ್ ಪ್ರತಿಕ್ರಿಯಿಸಿದ್ದರು.


ಗ್ಲೆನ್ ಡಿಸೋಜ ಎಂಬುವವರು, ‘ಬೊಮ್ಮಾಯಿ ಕರ್ನಾಟಕವನ್ನು ಉತ್ತರ ಪ್ರದೇಶ ಮಾಡಲು ಹೊರಟಿದ್ದಾರೆ. ಕರ್ನಾಟಕ ಬಸವಣ್ಣನ ನಾಡು. ಶಾಂತಿಯ ತೋಟ ಎಂದೇ ಹೆಸರಾಗಿದೆ. ಆದರೆ, ಈಗ ಬೊಮ್ಮಾಯಿ ಅವರ ಆಡಳಿತದಲ್ಲಿ ಕರ್ನಾಟಕ ಉತ್ತರ ಪ್ರದೇಶವಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದರು.


ಹೋರಾಟಗಾರ ವಿನಯ್ ಶ್ರೀನಿವಾಸ, ‘ಮತೀಯ ಗೂಂಡಾಗಿರಿ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ನಾಶಮಾಡುತ್ತದೆ. ಇದು ಮತೀಯವಾದಿಗಳು ಹಾಗೂ ಫ್ಯಾಸಿಸ್ಟ್ ಮನಸ್ಥಿತಿಯವರು ಎಸಗುವ ಕೃತ್ಯ. ಇದರಿಂದ ಸಮಾಜ ಒಡೆದುಹೋಗುತ್ತದೆ. ನಮ್ಮ ಹಳೆಯ ಕರ್ನಾಟಕವನ್ನು ವಾಪಸು ಕೊಡಿ’ ಎಂದು ಆಗ್ರಹಿಸಿದ್ದನ್ನು ಸ್ಮರಿಸಬಹುದು.


‘ಹಿಂಸೆಗೆ ಪ್ರಚೋದನೆ
ನೈತಿಕತೆಯ ಹೆಸರಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುವಂತಹ ಹೇಳಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ’ ಎಂದು ಚಿಂತಕರು, ಹೋರಾಟಗಾರರ ಮತ್ತು ಜನಪರ ಸಂಘಟನೆಗಳ ಪ್ರಮುಖರು ಜಂಟಿ ಹೇಳಿಕೆಯಲ್ಲಿ ದೂರಿದ್ದರು.
ಅನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಮುಖ್ಯಮಂತ್ರಿ ಗಟ್ಟಿ ಧ್ವನಿಯಲ್ಲಿ ಖಂಡಿಸುತ್ತಾರೆ ಎಂದು ನಿರೀಕ್ಷಿಸಿದ್ದೆವು. ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ನಡೆದಿದ್ದ ಪ್ರಕರಣದಲ್ಲಿ ಕೈಗೊಂಡಂತೆ ಬಿಗಿ ನಿಲುವಿನ ನಿರೀಕ್ಷೆಯೂ ಇತ್ತು. ಆದರೆ, ಮುಖ್ಯಮಂತ್ರಿಯೇ ಈಗ ದುಷ್ಕೃತ್ಯವನ್ನು ಬೆಂಬಲಿಸಿದ್ದಾರೆ. ಅವರೊಳಗಿನ ಆಷಾಢಭೂತಿತನ ಬಯಲಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ ಎಂದಿದ್ದರು.

Join Whatsapp
Exit mobile version