ನವದೆಹಲಿ: 2020 ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಯುನೈಟೆಡ್ ಎಗೇನ್ಸ್’ಟ್ ಹೇಟ್ ಸದಸ್ಯ ಖಾಲಿದ್ ಸೈಫಿ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಖಜೂರಿ ಖಾಸ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್’ಐಆರ್ 101/2020 ರಲ್ಲಿ ಇಬ್ಬರನ್ನೂ ದೋಷಮುಕ್ತಗೊಳಿಸಿ ಈ ಆದೇಶ ಹೊರಡಿಸಿದ್ದಾರೆ.
ಖಾಲಿದ್ ಮತ್ತು ಸೈಫಿ ಇಬ್ಬರೂ ಎಫ್’ಐಆರ್’ನಲ್ಲಿ ಜಾಮೀನಿನ ಮೇಲೆ ಇದ್ದಾರೆ. ಆದರೂ, ಗಲಭೆಗಳ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿ ಯುಎಪಿಎ ಪ್ರಕರಣದಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ
ಐಪಿಸಿಯ ಸೆಕ್ಷನ್ 109, 114, 147, 148, 149, 153-ಎ, 186, 212, 353, 395, 427, 435, 435, 436, 452, 454, 505, 34 ಮತ್ತು 120-ಬಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.