Home ಟಾಪ್ ಸುದ್ದಿಗಳು ದೆಹಲಿ ಗಲಭೆ ಸಂತ್ರಸ್ತರಿಗೆ ಕಿರುಕುಳ| ಪೊಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಲಯ

ದೆಹಲಿ ಗಲಭೆ ಸಂತ್ರಸ್ತರಿಗೆ ಕಿರುಕುಳ| ಪೊಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಲಯ

ಹೊಸದಿಲ್ಲಿ: 2020 ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಗಲಭೆಯ ಸಂತ್ರಸ್ತರಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದೆಹಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ.

ಗಲಭೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಗಲಭೆ ಸಂತ್ರಸ್ತ ಸಲ್ಲಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.

ಕಳೆದ ವರ್ಷ ಹಿಂಸಾಚಾರದ ಸಮಯದಲ್ಲಿ ಒಂದು ಗುಂಪು ವೆಸ್ಟ್ ಕರವಾಲ್ ನಗರ ಪ್ರದೇಶದಲ್ಲಿ ತನ್ನ ಮನೆಯ ಮೇಲೆ ದಾಳಿ ನಡೆಸಿದ್ದಾರೆಂದು ಅರ್ಜಿದಾರ ಮುಹಮ್ಮದ್ ಸಲ್ಮಾನ್ ದೆಹಲಿಯ ಖಜೂರಿ ಖಾಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಟೇಷನ್ ಹೌಸ್ ಆಫೀಸರ್ ಎರಡು ಬಾರಿ ತನ್ನ ಹೇಳಿಕೆಯನ್ನು ದಾಖಲಿಸಿದ್ದರೂ ಅಕ್ನೋಲಜ್ ಮೆಂಟ್ ರಶೀದಿಯನ್ನು ನೀಡಲಿಲ್ಲ. ಕಳೆದ 18 ತಿಂಗಳಲ್ಲಿ ಒಂದೊಂದು ಕಾರಣ ನೀಡಿ ಕನಿಷ್ಠ 50 ಬಾರಿ ಠಾಣೆಗೆ ಕರೆಸಿ ಕಿರುಕುಳ ನೀಡಲಾಗಿದೆ ಎಂದು ಮುಂಬೈನ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗರ್ಗ್ ಅವರಿಗೆ ಸಲ್ಮಾನ್ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನೈಜ ಅಪರಾಧಿಗಳನ್ನು ಪತ್ತೆ ಮಾಡಲು ನಿರ್ದೇಶನ ನೀಡಿದ ಕೋರ್ಟ್ ದೂರುದಾರರಿಗೆ ಅನಗತ್ಯವಾಗಿ ಕಿರುಕುಳ ನೀಡದಂತೆ ತನಿಖಾಧಿಕಾರಿಗೆ ಈ ವೇಳೆ ಎಚ್ಚರಿಕೆ ನೀಡಿದೆ.

2020ರ ಫೆಬ್ರವರಿ 23 ಮತ್ತು ಫೆಬ್ರವರಿ 26 ನಡುವೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಸಂತ್ರಸ್ತರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ.

Join Whatsapp
Exit mobile version