Home ಟಾಪ್ ಸುದ್ದಿಗಳು ಬ್ರಿಜ್ ಭೂಷಣ್ ವಿರುದ್ಧ ಆರೋಪ ದಾಖಲಿಸುವಂತೆ ಕೋರ್ಟ್‌ಗೆ ಒತ್ತಾಯಿಸಿದ ದೆಹಲಿ ಪೊಲೀಸರು!

ಬ್ರಿಜ್ ಭೂಷಣ್ ವಿರುದ್ಧ ಆರೋಪ ದಾಖಲಿಸುವಂತೆ ಕೋರ್ಟ್‌ಗೆ ಒತ್ತಾಯಿಸಿದ ದೆಹಲಿ ಪೊಲೀಸರು!

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಮತ್ತು ಮಾಜಿ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಹೊರಿಸುವಂತೆ ಇಲ್ಲಿನ ನ್ಯಾಯಾಲಯವನ್ನು ದೆಹಲಿ ಪೊಲೀಸರು ಒತ್ತಾಯಿಸಿದ ಘಟನೆ ವರದಿಯಾಗಿದೆ.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಆರೋಪ ದಾಖಲಿಸುವ ಕುರಿತು ವಾದ ಮುಕ್ತಾಯಗೊಳಿಸಲಾಗಿದ್ದು, ಆಪಾದಿತ ಕೆಲವು ಘಟನೆಗಳು ವಿದೇಶದಲ್ಲಿ ನಡೆದಿರುವುದರಿಂದ, ಅವು ದೆಹಲಿಯ ನ್ಯಾಯಾಲಯಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಾದವನ್ನು ಪೊಲೀಸರು ವಿರೋಧಿಸಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜ್ಪೂತ್ ಅವರ ಮುಂದೆ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಆರೋಪ ದಾಖಲಿಸುವಂತೆ ಕೋರ್ಟ್‌ಗೆ ಒತ್ತಾಯಿಸಿದ್ದು, ದೆಹಲಿ ಸೇರಿದಂತೆ ವಿದೇಶಗಳಲ್ಲಿ ಮತ್ತು ಭಾರತದ ಒಳಗೆ ಸಿಂಗ್ ಅವರು ನಡೆಸಿದ ಲೈಂಗಿಕ ಕಿರುಕುಳದ ಘಟನೆಗಳು ಅದೇ ಅಪರಾಧದ ಭಾಗವಾಗಿವೆ ಎಂದು ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಲು ದೆಹಲಿ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದೂ ಪೊಲೀಸರು ನ್ಯಾಯಾಧೀಶರಿಗೆ ತಿಳಿಸಿದ್ದಾರೆ.ದೆಹಲಿ ಪೊಲೀಸರ ವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿದೆ.

ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಜೂನ್ 15, 2023 ರಂದು ದೆಹಲಿ ಪೊಲೀಸರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

Join Whatsapp
Exit mobile version