ನವದೆಹಲಿ: ದುಬಾರಿ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು, ಅವರಿಂದ 43 ಆ್ಯಪಲ್ ಐಫೋನ್ ಹಾಗೂ ಒಂದು ಸ್ಯಾಮ್ಸಂಗ್ ಫೋಲ್ಡ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ದೆಹಲಿಯ ದೇವ ನಗರ ಪ್ರದೇಶದ ಕರೋಲ್ಬಾಗ್ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಇತ್ತೀಚೆಗೆ ಐಪಿ ಎಸ್ಟೇಟ್ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕಳುವಾಗಿದ್ದ ಐಫೋನ್–15 ಅನ್ನು ಈ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನವದೀಪ್ ಕೌರ್ (26) ಹಾಗೂ ರಮಣ್ದೀಪ್ ಭಂಗು (33) ಬಂಧಿತರು. ಮೊಬೈಲ್ ರಿಪೇರಿ ಉದ್ಯಮದಲ್ಲಿ ನಷ್ಟ ಅನುಭವಿಸಿದ ಬಳಿಕ, ಮುಂದಿನ ದಾರಿ ನೋಡುತ್ತಿದ್ದ ಅವರು ಕಳ್ಳತನಕ್ಕೆ ಇಳಿದಿದ್ದರು.
ಪಂಜಾಬ್ನ ಭಟಿಂಡ ಮೂಲದ ಬಿ.ಎಸ್ಸಿ ಪದವೀಧರಳಾಗಿರುವ ನವದೀಪ್ ಕೌರ್ ಮೊಬೈಲ್ ರಿಪೇರಿ ತಂತ್ರಜ್ಞಳೂ ಆಗಿದ್ದು, ಕದ್ದ ಮೊಬೈಲ್ಗಳನ್ನು ಬಿಚ್ಚಿ, ಬಿಡಿಭಾಗ ಕಳಚಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
