Home ಟಾಪ್ ಸುದ್ದಿಗಳು ‘ವಿಸ್ತಾರ ನ್ಯೂಸ್ʼ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶವನ್ನು ಹೊರಡಿಸಿದ ದೆಹಲಿ ಹೈಕೋರ್ಟ್

‘ವಿಸ್ತಾರ ನ್ಯೂಸ್ʼ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶವನ್ನು ಹೊರಡಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಟಾಟಾ ಸಿಯಾ ಏರ್ಲೈನ್ಸ್ ಲಿಮಿಟೆಡ್‌ನ ನೋಂದಾಯಿತ ಮತ್ತು ಜನಜನಿತ ʼವಿಸ್ತಾರʼ ಟ್ರೇಡ್ ಮಾರ್ಕ್ ಅನ್ನು ಮುಂದಿನ ವಿಚಾರಣೆಯವರೆಗೆ ಬಳಕೆ ಮಾಡದಂತೆ ನಿರ್ಬಂಧಿಸಿ ಕನ್ನಡದ ಸುದ್ದಿ ವಾಹಿನಿ ಮತ್ತು ಡಿಜಿಟಲ್ ಮಾಧ್ಯಮ ‘ವಿಸ್ತಾರ ನ್ಯೂಸ್ʼನ ಮಾತೃ ಸಂಸ್ಥೆಯಾದ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶವನ್ನು ದೆಹಲಿ ಹೈಕೋರ್ಟ್ ಹೊರಡಿಸಿದೆ.

ತನ್ನ ನೋಂದಾಯಿತ ಟ್ರೇಡ್ ಮಾರ್ಕ್ ʼವಿಸ್ತಾರʼವನ್ನು ಬಳಕೆ ಮಾಡದಂತೆ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಟಾಟಾ ಸಮೂಹದ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ಮೇಲ್ನೋಟಕ್ಕೆ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಬಹುದಾಗಿದೆ. ಪ್ರಯೋಜನಗಳ ಸಂತುಲಿತತೆಯನ್ನು ಪರಿಗಣಿಸಿದಲ್ಲಿ ಅದು ಫಿರ್ಯಾದಿಯ ಪರವಾಗಿದ್ದು, ಪ್ರತಿಬಂಧಕಾದೇಶ ಮಾಡದಿದ್ದರೆ ಫಿರ್ಯಾದಿಗೆ ಸರಿಪಡಿಸಲಾಗದ ಸಮಸ್ಯೆಯಾಗಲಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಹೀಗಾಗಿ, “ಮುಂದಿನ ವಿಚಾರಣೆಯವರೆಗೆ ಪ್ರತಿವಾದಿಗಳು ಮತ್ತು ಸಂಬಂಧಿತರು ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆ ಕನ್ನಡ ಸೇರಿದಂತೆ ಎಲ್ಲಿಯೂ ‘ವಿಸ್ತಾರʼ ಟ್ರೇಡ್ ಮಾರ್ಕ್ ಬಳಸದಂತೆ ಹಾಗೂ ಫಿರ್ಯಾದಿಯ ಸೇವೆ ಅಥವಾ ಉತ್ಪನ್ನ ಒದಗಿಸದಂತೆ ನಿರ್ಬಂಧಿಸಲಾಗಿದೆ. ಅಲ್ಲದೇ, ತಕ್ಷಣದಿಂದಲೇ www.vistaranews.com ವೆಬ್ ಸೈಟ್ ನಿರ್ಬಂಧಿಸಲು ಪ್ರತಿವಾದಿಗಳಿಗೆ ಆದೇಶಿಸಲಾಗಿದೆ” ಎಂದು ಪೀಠವು ಹೇಳಿದೆ.

ತನ್ನ ನೋಂದಾಯಿತ ಟ್ರೇಡ್ ಮಾರ್ಕ್ ʼವಿಸ್ತಾರʼವನ್ನು ಬಳಕೆ ಮಾಡದಂತೆ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಶಾಶ್ವತ ಪ್ರತಿಬಂಧಕಾದೇಶ ಮಾಡುವಂತೆ ಸಿಂಗಪೋರ್ ಏರ್ಲೈನ್ಸ್ ಲಿಮಿಟೆಡ್ ಜೊತೆಗೆ ಜಂಟಿ ಸಹಭಾಗಿತ್ವ ಹೊಂದಿರುವ ಟಾಟಾ ಸಮೂಹದ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.

(ಕೃಪೆ: ಬಾರ್& ಬೆಂಚ್)

Join Whatsapp
Exit mobile version