Home ಕರಾವಳಿ ಸರಳ, ಭಕ್ತಿ ಪೂರ್ವಕವಾಗಿ ಈದ್ ಮಿಲಾದ್ ಆಚರಿಸಲು ಷರತ್ತುಬದ್ಧ ಅನುಮತಿ : ಜಿಲ್ಲಾಧಿಕಾರಿ ಸಾಮೂಹಿಕ ಮೆರವಣಿಗೆ...

ಸರಳ, ಭಕ್ತಿ ಪೂರ್ವಕವಾಗಿ ಈದ್ ಮಿಲಾದ್ ಆಚರಿಸಲು ಷರತ್ತುಬದ್ಧ ಅನುಮತಿ : ಜಿಲ್ಲಾಧಿಕಾರಿ ಸಾಮೂಹಿಕ ಮೆರವಣಿಗೆ ನಿಷೇಧ

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ದರವು ಶೇ.1 ಕ್ಕಿಂತ ಕಡಿಮೆ ಇದ್ದು, ಕೋವಿಡ್-19 ಪಾಸಿಟಿವಿಟಿ ದರ ಏರಿಕೆಯಾಗದಂತೆ ಈದ್ ಮಿಲಾದ್ ಆಚರಣೆಯನ್ನು ಸರಳ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಬೇಕಾಗಿದೆ.

ಆದ್ದರಿಂದ ಸರಕಾರದ ಆದೇಶದನ್ವಯ ಮತ್ತು ಜಿಲ್ಲೆಯ ಪ್ರಸ್ತಕ ವಿದ್ಯಮಾನಗಳನ್ನು ಅವಲೋಕಿಸಿ ಕೋವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಈದ್ ಮಿಲಾದ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಈ ಕೆಳಗಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಅನುಮತಿಸಿ ಆದೇಶ ಹೊರಡಿಸಿದ್ದಾರೆ.

ಮಾರ್ಗಸೂಚಿಗಳಿವು:

ಕೋವಿಡ್-19 ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸುವುದು.

ಜಿಲ್ಲೆಯಾದ್ಯಂತ ಆಚರಿಸಲಿರುವ ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಸಾಮೂಹಿಕ ಮೆರವಣಿಗೆ ನಿಷೇಧಿಸಲಾಗಿದೆ.

ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ 100 ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರರನ್ನು ಕಡ್ಡಾಯವಾಗಿ ಪಾಲಿಸಬೇಕು.

ಮಸೀದಿಗಳಲ್ಲಿ ಮತ್ತು ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್-19ರ ಶಿಷ್ಟಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಈದ್ ಮಿಲಾದ್ ಆಚರಣೆ ನೆರವೇರಿಸುವುದು.

ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು/ ಡಿಜಿಟಲ್ ಸೌಂಡ್ ಸಿಸ್ಟಮ್ (ಡಿಜೆ) ಬಳಕೆಯನ್ನು ನಿಷೇಧಿಸಲಾಗಿದೆ.

ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸತಕ್ಕದ್ದು ಮತ್ತು ಮಾಸ್ಕ್ ಧರಿಸದೆ ಸೇರತಕ್ಕಂತಹ ಸಾರ್ವಜನಿಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

60 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಿಕೊಂಡು ಹಬ್ಬವನ್ನು ಆಚರಿಸುವುದು.

ಸ್ಯಾನಿಟೈಸೇಷನ್ ಹಾಗೂ ಹ್ಯಾಂಡ್ ವಾಷ್ ನೊಂದಿಗೆ ಕೈ ತೊಳೆಯಲು ಪ್ರವೇಶ ದ್ವಾರದಲ್ಲಿ ಸೂಕ್ತ ವ್ಯವಸ್ಥೆ ಮಾಡುವುದು.

ಕೋವಿಡ್-19 ಸಮುಚಿತ ವರ್ತನೆಗಳೊಂದಿಗೆ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು. ಒಂದು ವೇಳೆ ಹೆಚ್ಚು ಜನರು ಆಗಮಿಸಿದಲ್ಲಿ 2 ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವುದು.

ಕೋವಿಡ್-19 ಸಮಚಿತ ವರ್ತನೆಯಂತೆ ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಕೈಗಳನ್ನು ಸೋಪು ಮತ್ತು ಸ್ಯಾನಿಟೈಸರ್ಗಳಿಂದ ಶುಚಿಗೊಳಿಸತಕ್ಕದ್ದು. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಬೇಕು.

ಮಸೀದಿಗಳ ಪ್ರಾರ್ಥನೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮ ಮನೆಗಳಿಂದ ಮುಸಲ್ಲಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರತಕ್ಕದ್ದು. ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಗಳನ್ನು ಮಾಡತಕ್ಕದಲ್ಲ.

ಮಸೀದಿಗಳನ್ನು ಹೊರತುಪಡಿಸಿ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿಮಹಲ್ ಮತ್ತಿತರ ತೆರದ ಜಾಗಗಳಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಆಯೋಚಿಸುವಂತಿಲ್ಲ.

ಖಬರಸ್ಥಾನದಲ್ಲಿ ಈದ್ ಮಿಲಾದ್ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ/ ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ ಮತ್ತು ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಅಯೋಚಿಸುವಂತಿಲ್ಲ.

ಕೋವಿಚ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2015ರ ಕಲಂ 51 ರಿಂದ 60 ರನ್ವಯ, ಐಪಿಸಿ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4, 5 ಮತ್ತು 10 ರಂತೆ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version