Home ಟಾಪ್ ಸುದ್ದಿಗಳು ಕೆಂಪು ಸಮುದ್ರದಲ್ಲಿ ಅಪಾಯಕಾರಿ ಕೊಳ ಪತ್ತೆ

ಕೆಂಪು ಸಮುದ್ರದಲ್ಲಿ ಅಪಾಯಕಾರಿ ಕೊಳ ಪತ್ತೆ

ವಾಷಿಂಗ್ಟನ್: ಕೆಂಪು ಕಡಲಿನ ತಳದಲ್ಲಿ ಈಜಿ ಬರುವ ಯಾವುದನ್ನೇ ಆದರೂ ಕೊಲ್ಲುವ ಭಾರೀ ಅಪಾಯಕಾರಿ ಕೊಳವೊಂದನ್ನು ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ದೂರ ಚಾಲಿತ ನೀರು ವಾಹನವನ್ನು ಬಳಸಿ ನೀರ ಮೇಲಿನಿಂದ 1.7 ಕಿಮೀ ಆಳದಲ್ಲಿ ಈ ಅತಿ ಉಪ್ಪು ಕೊಳವನ್ನು ಪತ್ತೆ ಹಚ್ಚಲಾಗಿದೆ. ಹತ್ತು ಗಂಟೆಗಳ ಶೋಧದ ಬಳಿಕ ಈ ಕೊಳ ಪತ್ತೆಯಾಗಿದೆ.

ಈ ಕೊಳದ ನೀರು ಅತ್ಯಂತ ಉಪ್ಪು ಹಾಗೂ ಇತರ ರಾಸಾಯನಿಕಗಳನ್ನು ಒಳಗೊಂಡಿದೆ. ಈ ಕಡಲಾಳದ ಕೆರೆಯು ಯಾವುದೇ ಈಜಿ ಹೋಗುವ ಜೀವಿಯನ್ನು ಕೊಲ್ಲುತ್ತದೆ.

ಯಾವುದೇ ಪ್ರಾಣಿ ಇದರೊಳಕ್ಕೆ ಈಜಿದಾಗ ಕ್ಷಣದಲ್ಲಿ ಸಾವನ್ನಪ್ಪುತ್ತದೆ. ಇದು ಲೋಕದ ಅತಿ ಪ್ರಕೃತಿ ಲೀಲೆಯ ತಾಣಗಳಲ್ಲಿ ಒಂದು ಎಂದು ಹಿರಿಯ ಸಂಶೋಧಕ ಸ್ಯಾಮ್ ಪುರ್ಕಿಸ್ ವಿಶ್ಲೇಷಿಸಿದ್ದಾರೆ.

ಈಲ್ ಗಳು, ಕೆಲವು ಮೀನುಗಳು, ಸಿಗಡಿಗಳು ಈ ಕೆರೆಯನ್ನು ತಮ್ಮ ಬೇಟೆ ತಾಣವಾಗಿ ಮಾಡಿಕೊಂಡಿವೆ. ಇಲ್ಲಿಗೆ ಈಜಿ ಬರುವ ಮೀನಿತ್ಯಾದಿ ಜೀವಿಗಳು ತಕ್ಷಣ ಮತಿ ತಪ್ಪುತ್ತವೆ. ತಕ್ಷಣ ಅವುಗಳನ್ನು ಎಳೆದುಕೊಂಡು ತಿನ್ನುತ್ತವೆ ಎಂದೂ ಪುರ್ಕಿಸ್ ಹೇಳಿದರು.

ಇಂಥ ಕೆರೆಗಳು, ಮೊದಲ ಕಡಲುಗಳು ಹೇಗೆ ಹುಟ್ಟಿದವು ಎಂಬುದನ್ನು ಕಂಡು ಹಿಡಿಯಲು ವಿಜ್ಞಾನಿಗಳಿಗೆ ನೆರವಾಗುತ್ತದೆ ಎಂದು ಹಿರಿಯ ವಿಜ್ಞಾನಿಗಳು ಹೇಳಿದರು.

ಈ ಕೊಳವು ವಿಭಿನ್ನ ಏಕಾಣು ಜೀವಿಗಳಿಗೆ ನೆಲೆಯಾಗಿದ್ದು ಬಹು ವೈವಿಧ್ಯವನ್ನು ಪಡೆದಿದೆ. ಇಂಥ ಪರಿಸ್ಥಿತಿಯಲ್ಲೂ ಯಾರು ಬದುಕಬಹುದು ಎಂಬುದರ ಮೇಲೆ ಅನ್ಯ ಗ್ರಹ ವಾಸಿಗಳ ಪತ್ತೆಗೂ ಇದು ಸಹಾಯಕ ಎಂದೂ ಪುರ್ಕಿಸ್ ಹೇಳಿದರು.

“ನಮ್ಮ ಭೂಮಿಯ ಮಿತಿಯನ್ನು ಅರ್ಥ ಮಾಡಿಕೊಳ್ಳದವರೆಗೆ ನಾವು ಅನ್ಯ ಗ್ರಹ ಜೀವಿಗಳನ್ನು ಕಂಡುಕೊಳ್ಳುತ್ತೇವೆನ್ನುವುದು ಬಹಳ ಕಷ್ಟದ ಕೆಲಸ” ಎಂದೂ ಪುರ್ಕಿಸ್ ತಿಳಿಸಿದರು.

ಕಳೆದ 30 ವರುಷಗಳಿಂದ ಕೆಂಪು ಸಮುದ್ರ, ಮೆಕ್ಸಿಕೋ ಕೊಲ್ಲಿ, ಮೆಡಿಟರೇನಿಯನ್ ಸಮುದ್ರದಲ್ಲಿ ಇಂಥ ಒಂದು ಡಜನ್ ಸಾವು ಕೆರೆಗಳನ್ನು ತಳದಲ್ಲಿ ಪತ್ತೆ ಹಚ್ಚಿರುವುದಾಗಿ ನ್ಯೂಯಾರ್ಕ ಟೈಮ್ಸ್ ವರದಿ ಮಾಡಿದೆ.

Join Whatsapp
Exit mobile version