ಕೊಪ್ಪಳ: ಹೊಲಕ್ಕೆ ದನ ನುಗ್ಗಿತ್ತು ಎಂಬ ಕಾರಣಕ್ಕೆ ದಲಿತ ಮಹಿಳೆಯೊಬ್ಬರ ಮೇಲೆ ಮೇಲ್ಜಾತಿ ವ್ಯಕ್ತಿಯೋರ್ವ ಚಪ್ಪಲಿಯಿಂದ ಹಲ್ಲೆ ನಡೆಸಿ, ಜಾತಿ ನಿಂದನೆಗೈದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ವೈರಲ್ ಆಗಿದೆ. ಜನವರಿ 3ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಲಿತ ಸಮುದಾಯದ ಮಾದಿಗ ಜನಾಂಗಕ್ಕೆ ಸೇರಿದ ಶೋಭಮ್ಮ (30) ಹಲ್ಲೆಗೊಳಗಾದವರು. ಶೋಭಮ್ಮ ಅವರ ದನ ಭೂಮಾಲೀಕ ಅಮರೇಶಪ್ಪ ಕುಂಬಾರ ಎಂಬುವವರ ಹೊಲಕ್ಕೆ ನುಗ್ಗಿ ಹುಲ್ಲು ತಿಂದಿದೆ ಎನ್ನಲಾಗಿದೆ.
ಆ ಹಸುವನ್ನು ಅಮರೇಶಪ್ಪ ಹಿಡಿದು ಕಟ್ಟಿ ಹಾಕಿದ್ದ. ಹಸುವನ್ನು ಹುಡುಕಿಕೊಂಡು ಬಂದ ಶೋಭಮ್ಮ ಅವರು ಭೂಮಾಲೀಕ ಅಮರೇಶಪ್ಪ ಅವರಲ್ಲಿ ಹಸು ಬಿಟ್ಟು ಕೊಡುವಂತೆ ಮನವಿ ಮಾಡಿದರು. ಅಷ್ಟರಲ್ಲಿ ಅಮರೇಶಪ್ಪ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದು, ಜಾತಿ ನಿಂದನೆಗೈದಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಶೋಭಮ್ಮರನ್ನು ಕೊಪ್ಪಳದ ಗಂಗಾವತಿಯಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಘಟನೆಯ ಬಗ್ಗೆ ಶೋಭಮ್ಮನ ಕುಟುಂಬಸ್ಥರು ಪೋಲಿಸರಿಗೆ ದೂರು ನೀಡಿದರು. ಆರೋಪಿ ಅಮರೇಶಪ್ಪ ಕುಂಬಾರನ ವಿರುದ್ಧ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.