ಕಾನ್ಪುರ: ಮಹಿಳಾ ಖೋ-ಖೋ ದಲ್ಲಿ ಚಾಂಪಿಯನ್ ಆಗಿದ್ದ ಮಾಜಿ ಕ್ರೀಡಾಪಟು, ದಲಿತ ಮಹಿಳೆಯನ್ನು ಯುಪಿಯ ಬಿಜ್ನೋರ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಾತ್ರವಲ್ಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕುಟುಂಬದ ಮೂಲಗಳು ಆರೋಪಿಸಿವೆ.
ದುಷ್ಕರ್ಮಿಗಳ ನಡೆಯನ್ನು ಪ್ರತಿರೋಧಿಸಿದ ಹೊರತಾಗಿಯೂ ಆಕೆಯನ್ನು ಕತ್ತು ಹಿಸುಕಿ ಕೊಲೆ ನಡೆಸಲಾಗಿದೆ. ಮಹಿಳೆಯ ಶವ ಬಿಜ್ನೋರ್ ರೈಲ್ವೇ ನಿಲ್ದಾಣದ ಬಳಿ ರೈಲ್ವೇ ಸ್ಲೀಪರ್ ಗಳ ಮಧ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಕುಟಿಯಾ ಕಾಲೋನಿಯಾ ನಿವಾಸಿಯಾದ ಸಂತ್ರಸ್ತೆ ಶಾಲೆಗೆ ತನ್ನ ಬಯೋಡಾಟವನ್ನು ಸಲ್ಲಿಸಲು ಹೋಗಿದ್ದರು. ಬಹಳ ಹೊತ್ತಾದರೂ ಮನೆಗೆ ಹಿಂದಿರುಗಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಆಕೆಗೆ ಕರೆ ಮಾಡಿದಾಗ, ಆಕೆಯ ಮೊಬೈಲ್ ಸ್ವಿಚ್ ಆಫ್ ಅಗಿತ್ತು.
2016 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಖೋ-ಖೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಆಕೆಯ ಕುಟುಂಬ ದೂರು ನೀಡಿದ ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆಂದು ಕುಟುಂಬದ ಮೂಲಗಳು ಆರೋಪಿಸಿವೆ. ಪೊಲೀಸರ ಮೇಲೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಪೊಲೀಸರು ಅಪರಿಚಿತರ ವಿರುದ್ಧ ಕೊಲೆ, ಹಲ್ಲೆ ಮತ್ತು ಕಿರುಕುಳ ಸೆಕ್ಷನ್ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ.
ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿಲ್ಲವೆಂದು ಹೇಳಲಾಗುತ್ತಿದೆ. ಆರೋಪಿಗಳ ಬಂಧನದ ನಂತರ ಘಟನೆಯ ನೈಜತೆಯನ್ನು ಬಹಿರಂಗ ಪಡಿಸುವುದಾಗಿ ಸ್ಥಳೀಯ ಎಸ್ಪಿ ಧರ್ಮ್ ವೀರ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದರು.