Home ಟಾಪ್ ಸುದ್ದಿಗಳು ಮನೆ ಹೊರಗೆ ಅಂಬೇಡ್ಕರ್‌ ಪೋಸ್ಟರ್‌ ಹಾಕಿದ್ದಕ್ಕೆ ದಲಿತ ಯುವಕನ ಥಳಿಸಿ ಹತ್ಯೆ ಮಾಡಿದ ಜಾತಿವಾದಿ ಉಗ್ರರು

ಮನೆ ಹೊರಗೆ ಅಂಬೇಡ್ಕರ್‌ ಪೋಸ್ಟರ್‌ ಹಾಕಿದ್ದಕ್ಕೆ ದಲಿತ ಯುವಕನ ಥಳಿಸಿ ಹತ್ಯೆ ಮಾಡಿದ ಜಾತಿವಾದಿ ಉಗ್ರರು

ಜೈಪುರ : ತನ್ನ ಮನೆ ಹೊರಗೆ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಪೋಸ್ಟರ್‌ ಅಂಟಿಸಿದ್ದ ದಲಿತ ಯುವಕನ ಮೇಲೆ ಒಬಿಸಿ ಸಮುದಾಯದ ಜಾತಿವಾದಿ ಉಗ್ರರು ಥಳಿಸಿದ ಪರಿಣಾಮ ಆತ ಸಾವಿಗೀಡಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿದ್ದ ಯುವಕ ಎರಡು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ದುಷ್ಕರ್ಮಿಗಳು ಅಂಬೇಡ್ಕರ್‌ ಅವರ ಪೋಸ್ಟರ್‌ ಹರಿದುಹಾಕಿದ್ದರು ಎಂದೂ ಹೇಳಲಾಗಿದೆ.

ರಾಜಸ್ಥಾನದ ಹನುಮಾನ್‌ ಗಢ ಜಿಲ್ಲೆಯ ಕಿಕ್ರಾಲಿಯ ಗ್ರಾಮದ ತನ್ನ ಮನೆಯ ಬಳಿ ಜೂ.5ರಂದು ಭೀಮ್‌ ಆರ್ಮಿ ಸದಸ್ಯ ವಿನೋದ್‌ ಬಾಮ್ನಿಯಾ ಮೇಲೆ ಹಲ್ಲೆ ನಡೆದಿತ್ತು. ಎರಡು ದಿನಗಳ ಬಳಿಕ ಗಾಯಾಳು ಯುವಕ ಶ್ರೀಗಂಗಾನಗರ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ.

ಪೋಸ್ಟರ್‌ ವಿಷಯಕ್ಕೆ ಸಂಬಂಧಿಸಿ ಮೃತನ ಕುಟುಂಬಸ್ಥರು ಗುರುತಿಸಿರುವ ಇಬ್ಬರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೋಸ್ಟರ್‌ ಘಟನೆಯಲ್ಲಿ ಭಾಗಿಯಾಗಿದ್ದವರಲ್ಲಿ ಅನಿಲ್‌ ಸಿಹಾಗ್‌ ಮತ್ತು ರಾಕೇಶ್‌ ಸಿಹಾಗ್‌ ಬಂಧಿತರಲ್ಲಿ ಸೇರಿದ್ದಾರೆ.

ಆರೋಪಿಗಳು ಹಲ್ಲೆ ಮಾಡುವ ವೇಳೆ ಜಾತಿ ನಿಂದನೆ ಮಾಡಿದ್ದಾರೆ. “ನಿನಗೆ ಇಂದು ಅಂಬೇಡ್ಕರ್‌ ವಾದ ನೆನಪಿಸುತ್ತೇವೆ” ಎಂದು ಹಲ್ಲೆಕೋರರು ಹೇಳಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಭೀಮ್‌ ಆರ್ಮಿ ಪ್ರತಿಭಟನೆ ನಡೆಸಿತ್ತು.

Join Whatsapp
Exit mobile version