ಮಂಗಳೂರು: ಈ ವರ್ಷದ ಮದರಸ ತರಗತಿಗಳ ಪುನರಾರಂಭವನ್ನು ಒಂದು ತಿಂಗಳು ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಜಿಲ್ಲೆಯ ಎಲ್ಲ ಮದರಸ ಆಡಳಿತ ಸಮಿತಿಗಳಿಗೆ ಸೂಚಿಸಿದ್ದಾರೆ.
ರಮಳಾನ್ ತಿಂಗಳು ಮುಕ್ತಾಯದ ಸ್ವಲ್ಪ ದಿನಗಳ ನಂತರ ಮದರಸ ತರಗತಿಗಳು ಆರಂಭಗೊಳ್ಳುವುದು ವಾಡಿಕೆ. ಆದರೆ, ಪ್ರಸಕ್ತ ವರ್ಷದ ಶಾಲಾ ಪರೀಕ್ಷೆಗಳು ಇತ್ತೀಚೆಗಷ್ಟೇ ಮುಗಿದಿದ್ದು, ಶಾಲೆಗಳಿಗೆ ಈಗಷ್ಟೇ ರಜೆ ಪ್ರಾರಂಭವಾಗಿದೆ. ರಜೆಯಲ್ಲಿ ಮಕ್ಕಳು, ಕುಟುಂಬದೊಂದಿಗೆ ಸಮಯ ಕಳೆಯಲು ದೇಶ ವಿದೇಶಗಳಿಗೆ ತೆರಳುವುದು ಸಹಜವಾಗಿದೆ.
ಅಲ್ಲದೇ, ಏಪ್ರಿಲ್ ತಿಂಗಳಲ್ಲಿ ಬೇಸಿಗೆ ತೀವ್ರವಾಗಿರುವುದರಿಂದ ಮಕ್ಕಳ ದೈಹಿಕ ಆರೋಗ್ಯ ದೃಷ್ಟಿಯಿಂದ ಮದರಸಗಳಿಗೆ ರಜೆ ನೀಡುವುದು ಸೂಕ್ತವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮದರಸಗಳು ತರಗತಿಗಳ ಪುನರಾರಂಭವನ್ನು ಮೇ ತಿಂಗಳಿಗೆ ಮುಂದೂಡಬೇಕು ಎಂದು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.