Home ಕರಾವಳಿ ದಕ್ಷಿಣ ಕನ್ನಡ: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ.9 ಕೊನೇ ದಿನ

ದಕ್ಷಿಣ ಕನ್ನಡ: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ.9 ಕೊನೇ ದಿನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು, ಹೆಸರು ಸೇರ್ಪಡೆಗೆ ಡಿ.9 ಕೊನೆಯ ದಿನವಾಗಿದೆ. ಅದರೊಳಗೆ 18 ವರ್ಷ ತುಂಬಿದವರು ಹೆಸರು ಸೇರ್ಪಡೆ ಮಾಡಿಕೊಂಡು ಮತ ಚಲಾಯಿಸುವ ಅರ್ಹತೆಯುಳ್ಳವರಾಗಿ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ

18 ವರ್ಷ ತುಂಬಿದ 25,045 ಮತದಾರರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 18 ವರ್ಷ ತುಂಬಿದ 45,530 ಯುವ ಜನರಿದ್ದಾರೆ. ಉಳಿದಿರುವ 20,494 ಮಂದಿಯನ್ನು ಮತದಾರರ ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಅದರಲ್ಲಿ
ಯುವ ಮತದಾರರಲ್ಲಿ 3,742 ಮಂದಿಯ ಫಾರ್ಮ್-6 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಶೀಘ್ರದಲ್ಲಿ ಈ ಪ್ರಕ್ರಿಯೆ ಮುಗಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಚುನಾವಣ ಆಯೋಗ ಪ್ರತೀ ವರ್ಷ ನಾಲ್ಕು ದಿನಾಂಕವನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದೆ. ಪ್ರತೀ ವರ್ಷ ಜನವರಿ, ಎಪ್ರಿಲ್‌, ಜುಲೈ ಮತ್ತು ಅಕ್ಟೋಬರ್‌ 1ನೇ ತಾರೀಕಿಗೆ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ಮಾಡಲಾಗಿದೆ.

ಹೊಸ ಮತದಾರರು ತಮ್ಮ ಮತಗಟ್ಟೆಯ ಬೂತ್‌ ಮಟ್ಟದ ಅಧಿಕಾರಿಯವರಿಗೆ ಫಾರಂ-6 ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದಲ್ಲದೆ, ಮೊಬೈಲ್‌ ಆಯಪ್‌ ಬಳಸಿ VOTER HELPLINE ಮೂಲಕವೂ ಫಾರ್ಮ್-6 ಸಲ್ಲಿಸಬಹುದು. ಅದೂ ಅಲ್ಲದೆ, voters.eci.gov.in ವೆಬ್‌ಸೈಟ್‌ ಮೂಲಕವೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

Join Whatsapp
Exit mobile version