Home ಕರಾವಳಿ ದ.ಕ. ಬಿರುಸು ಪಡೆದ ಮುಂಗಾರು, ಹಲವೆಡೆ ಹಾನಿ: ಇಂದೂ ಭಾರಿ ಮಳೆ ಸಾಧ್ಯತೆ

ದ.ಕ. ಬಿರುಸು ಪಡೆದ ಮುಂಗಾರು, ಹಲವೆಡೆ ಹಾನಿ: ಇಂದೂ ಭಾರಿ ಮಳೆ ಸಾಧ್ಯತೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮುಂಗಾರು ಬಿರುಸು ಪಡೆದುಕೊಂಡಿದ್ದು, ಜಿಲ್ಲಾದ್ಯಂತ ಬುಧವಾರ ದಿನವಿಡೀ ಭಾರೀ ಮಳೆಯಾಗಿದೆ. ಉಳ್ಳಾಲ ತಾಲೂಕಿನ ಕುತ್ತಾರು ಮದನಿನಗರದಲ್ಲಿ ಮನೆ ಮೇಲೆ ಕಾಂಪೌಂಡ್‌ ಗೋಡೆ ಬಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೆ, ಜಿಲ್ಲೆಯ ಹಲವೆಡೆ ಹಾನಿ ಸಂಭವಿಸಿದೆ. ಇಂದು ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನಗರದ ಕಣ್ಣೂರು ಗ್ರಾಮದ ಕುಂಡಾಲದಲ್ಲಿ ಮುದಾಸಿರ್‌ ಅವರ ಮನೆಯ ಆವರಣ ಗೋಡೆ ಬುಧವಾರ ಮಧ್ಯಾಹ್ನ ಕುಸಿದಿದ್ದು, ಪಕ್ಕದ ಮನೆಗೂ ಹಾನಿಯಾಗಿದೆ. ಆ ವೇಳೆ ಮನೆಯ ಅಂಗಳದಲ್ಲಿ ಯಾರೂ ಇಲ್ಲದ ಕಾರಣ ಸಂಭವನೀಯ ಅಪಾಯ ತಪ್ಪಿದೆ.

ಮಂಗಳೂರು ನಗರದಲ್ಲಿ ದಿನವಿಡೀ ಬಿರುಸಿನ ಮಳೆಯಾಗಿದ್ದು, ಬಜಾಲ್‌, ಕೊಟ್ಟಾರ, ಕೊಟ್ಟಾರಚೌಕಿ, ಜಪ್ಪಿನಮೊಗರು, ಪಡೀಲ್‌ ಸಹಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀರು ನಿಂತು ಕೃತಕ ನೆರೆ ಸಂಭವಿಸಿದೆ. ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಕೆಲವು ಕಡೆ ಆವರಣ ಗೋಡೆ ಬಿದ್ದು, ಮನೆಗಳಿಗೆ ಹಾನಿ ಸಂಭವಿಸಿದೆ.

ಪಂಜ ಸಮೀಪದ ಪಡಿ³ನಂಗಡಿಯಲ್ಲಿ ಬರೆ ಕುಸಿದು ಮತ್ತು ಸುಳ್ಯದ ಜಯನಗರದಲ್ಲಿ ಆವರಣ ಗೋಡೆ ಕುಸಿದು ಮನೆಗೆ ಹಾನಿ ಸಂಭವಿಸಿದೆ. ಉಜಿರೆ ಸಮೀಪದ ಹಳೆ ಪೇಟೆಯಲ್ಲಿ ರಸ್ತೆಗೆ ಮರ ಬಿದ್ದಿದೆ. ಕಾಶಿಪಟ್ಣ, ಕುಕ್ಕೇಡಿ, ಹೊಸಂಗಡಿಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಕಡಂದಲೆ ಬಳಿ ಮರವೊಂದು ಮನೆಯ ಮೇಲೆ ಬಿದ್ದು ಹಾನಿ ಸಂಭವಿಸಿದೆ.

ಕೆಂಜಾರು ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು!
ಮಂಗಳೂರಿನ ಬಜಾಲ್‌ ರೈಲ್ವೇ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿ ನೀರು ಆವರಿಸಿತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಇದರಲ್ಲಿ ಕಾರೊಂದು ಸಿಲುಕಿ ಅಪಾಯಕ್ಕೆ ಕಾರಣವಾಯಿತು. ಕೂಡಲೇ ಅಗ್ನಿಶಾಮಕ ದಳದ ಅಧಿಕಾರಿಗಳು ಆಗಮಿಸಿ ಕಾರನ್ನು ನೀರಿನಿಂದ ಹೊರತಂದರು. ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಪರಿಶೀಲಿಸಿದರು.

ಕಡಲ್ಕೊರತ; ಅಪಾಯದಲ್ಲಿ ಮನೆಗಳು
ಕಡಲಿನ ಅಬ್ಬರ ಜೋರಾಗಿದ್ದು, ಕಡಲ್ಕೊರೆತ ದಿಂದಾಗಿ ಉಳ್ಳಾಲದ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಹಲವು ಮನೆಗಳು ಅಪಾಯ ಸ್ಥಿತಿಯಲ್ಲಿದೆ. ಬೈಕಂಪಾಡಿಯ ಮೀನಕಳಿಯದಲ್ಲಿ ಮಂಗಳ ವಾರವಷ್ಟೇ ಹಾಕಲಾಗಿದ್ದ ಮರಳು ಚೀಲ ಸಮುದ್ರ ಪಾಲಾಗುವ ಆತಂಕ ಎದುರಾಗಿದೆ. ಇಲ್ಲಿನ ಕಾಂಕ್ರೀಟ್‌ ರಸ್ತೆಯಲ್ಲಿ ಬಿರುಕು ಉಂಟಾಗಿದೆ.

ವಿದ್ಯುತ್‌ ಕಂಬಗಳಿಗೆ ಹಾನಿ
ಭಾರೀ ಗಾಳಿ, ಮಳೆಯಿಂದಾಗಿ ಕಳೆದೆರಡು ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ 168 ವಿದ್ಯುತ್‌ ಕಂಬಗಳಿಗೆ ಮತ್ತು 3 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ ಉಂಟಾಗಿದೆ. ಈವರೆಗೆ ಒಟ್ಟು 1,542 ವಿದ್ಯುತ್‌ ಕಂಬ ಮತ್ತು 27 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ.

ಮುನ್ನೆಚ್ಚರಿಕೆ ವಹಿಸಿ: ಡಿಸಿ
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ತಿಳಿಸಿದ್ದಾರೆ.

ಇನ್ನೆರಡು ದಿನ ಬಿರುಸಿನ
ಮಳೆ ಸಾಧ್ಯತೆ
ಕರಾವಳಿ ಭಾಗದಲ್ಲಿ ಇನ್ನೆರಡು ದಿನ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆಯು ಜೂ.27ರ ಬೆಳಗ್ಗೆ 8.30ರವರೆಗೆ “ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಬಳಿಕ ಜೂ.30ರ ಬೆಳಗ್ಗೆ 8.30ರ ವರೆಗೆ “ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಿದೆ.

Join Whatsapp
Exit mobile version