ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ?: ಪೊಲೀಸರ ಬೆವರಿಳಿಸಿದ ಡಿಕೆಶಿ

Prasthutha|

‘ನೀವು ಬದಲಾಗದಿದ್ದರೆ ನಿಮ್ಮನ್ನೇ ಬದಲಾಯಿಸುತ್ತೇವೆ’

- Advertisement -

ಬೆಂಗಳೂರು: ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ಪೊಲೀಸ್ ಅಧಿಕಾರಿಗಳನ್ನು ತರಾಟೆ ಡಿಸಿಎಂ ತೆಗೆದುಕೊಂಡರು.

ಈ ಹಿಂದಿನ ಸರ್ಕಾರದಲ್ಲಿ ನೀವು ಮಾಡಿದ ಕೆಲಸಗಳನ್ನು ನಾವು ನೋಡಿದ್ದೇವೆ. ನೀವು ಬದಲಾಗದಿದ್ದರೆ ನಿಮ್ಮನ್ನೇ ಬದಲಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡುವುದಿಲ್ಲ. ಮಂಗಳೂರು, ವಿಜಯಪುರ, ಬಾಗಲಕೋಟೆಯಲ್ಲಿ ನೀವು ಹೇಗೆ ಕೇಸರಿ ಬಟ್ಟೆ ಹಾಕೊಂಡು ಇಲಾಖೆಗೆ ಅವಮಾನ ಮಾಡಿದ್ರಿ ಅಂತಾ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಈ‌ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಾಗಿತ್ತು. ದೇಶದ ಬಗ್ಗೆ ಗೌರವ ಇದ್ರೆ ರಾಷ್ಟ್ರ ಧ್ವಜ ಹಾಕೊಂಡು ಕೆಲಸ ಮಾಡಿ. ನಮ್ಮ ಸರಕಾರದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ನಾವು ಬಿಡುವುದಿಲ್ಲ ಎಂದು ಡಿಕೆಶಿ ಗರಂ ಆಗಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿತ್ತು. ಆ ಗೌರವ, ಘನತೆಯನ್ನ ಹಾಳು‌ ಮಾಡಿದ್ದೀರಾ ನೀವು.‌ ಎಲ್ಲಿ ನೋಡಿದ್ರು ಬರೀ ಕಾಸು, ಕಾಸು, ಕಾಸು. ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು ಎಂದು‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜನ ಈ ಸರಕಾರದಿಂದ ಬಹುದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಿದ್ದಾರೆ.‌ ಅದು ಪೊಲೀಸ್ ಇಲಾಖೆಯಿಂದಲೇ ಶುರು ಆಗಬೇಕು. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಒಬ್ಬ ಎಡಿಜಿಪಿ ಒಎಂಆರ್‌ ಶೀಟ್‌ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ ನೋಡಿ. ಪ್ರೆಸ್ ಕಾನ್ಫರೆನ್ಸ್ ಮಾಡಿ ಪ್ರಕರಣ ಬಯಲಿಗೆ ತಂದವರಿಗೆ ಕಿರುಕುಳ ನೀಡಿದ್ದೀರಾ. ಪ್ರಿಯಾಂಕ್ ಖರ್ಗೆ ಅವರಿಗೆ ಕಾಟ ಕೊಟ್ಟಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮಿಂದ ನಮಗೆ ನಯಾಪೈಸೆ ಹಣ ಬೇಕಿಲ್ಲ. ನೀವು ಯಾರಿಗೂ ಹಣ ಕೊಡೋದು ಬೇಡ. ಜನ ನರಳದಂತೆ ಉತ್ತಮವಾಗಿ ಕೆಲಸ ಮಾಡಿದ್ರೆ ಸಾಕು ಎಂದು. ನಿಮ್ಮ ಹಿಂದಿನ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆ ಪೇ ಸಿಎಂ ಅಭಿಯಾನ ಮಾಡಿದಾಗ ನನ್ನ ಮತ್ತು ಸಿದ್ದರಾಮಯ್ಯರ ಜೊತೆ ಹೇಗೆ ನಡೆದುಕೊಂಡಿದ್ದೀರಾ ಗೊತ್ತಿದೆ. ನಮ್ಮ ಮೇಲೆ ಕೇಸ್ ಹಾಕಿದ್ರಿ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು, ಸುಳ್ಳು ಸಾವಿರಾರು ಕೇಸ್ ಹಾಕಿದ್ರಿ. ಅವರಿಗೆ ಕಿರುಕುಳ ನೀಡಿದ್ರಿ.‌ ನಮ್ಮನ್ನೇ, ಸಿದ್ದರಾಮಯ್ಯ ಅವರನ್ನೇ ಬಿಡದ ನೀವು ಇನ್ನು ಸಾಮಾನ್ಯ ಜನರನ್ನು ಬಿಡ್ತೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ, ಎದುರು ಪಾರ್ಟಿ ವಿರುದ್ಧ ಮಾತ್ರ ಯಾವುದೇ ಕೇಸ್ ಹಾಕಲಿಲ್ಲ. ಅವರ ಜತೆ ಶಾಮೀಲಾಗಿ ಕುಣಿದ್ರಿ. ಟಿಪ್ಪು ಸುಲ್ತಾನ್ ಅವರನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆ ಮಾಡಲು ಕರೆ ನೀಡಿದ, ಪ್ರೇರಣೆ ನೀಡಿದವರ ವಿರುದ್ಧ ಯಾಕೆ ಕೇಸ್ ಹಾಕಲಿಲ್ಲ ನೀವು. ಅದು ಕ್ರೈಂ ಅಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಏನೇನೂ ಮಾಡಿದ್ದೀರಾ ಅಂತ ನಮ್ಮ ಬಳಿ ಸಾಕ್ಷಿ ಇವೆ. ನಾವು ಎಲ್ಲವನ್ನೂ ವಾಚ್ ಮಾಡಿದ್ದೇವೆ. ಇವೆಲ್ಲ ನಮ್ಮ ಸರ್ಕಾರದಲ್ಲಿ ನಡೆಯುದಿಲ್ಲ. ನೀವು ಬದಲಾಗಬೇಕು. ನಿಮ್ಮ ವರ್ತನೆ ಬದಲಾಗಬೇಕು. ಇಲ್ಲ ಅಂದ್ರೆ ನಿಮ್ಮನ್ನೇ ಬದಲಾವಣೆ ಮಾಡಬೇಕಾಗುತ್ತದೆ‌ ಎಂದು‌ ಎಚ್ಚರಿಕೆ ನೀಡಿದ್ದಾರೆ.

ನಾವು ದ್ವೇಷ ಸಾಧಿಸೋದಿಲ್ಲ. ಅದರಲ್ಲಿ ನಮಗೆ ನಂಬಿಕೆ ಇಲ್ಲ. ನೀವು ಬದಲಾಗಿ, ಹಳೆಯದು ಬಿಡಿ. ಹೊಸದಾಗಿ ಕೆಲಸ ಶುರು ಮಾಡಿ. ಜನರ ನೆಮ್ಮದಿ ಕಾಪಾಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಿ. ಈ ಸರಕಾರದಿಂದ ಬದಲಾವಣೆ ಆಗುತ್ತಿದೆ ಎಂಬ ಸಂದೇಶವನ್ನು ನಿಮ್ಮ ಕೆಲಸದ ಮೂಲಕ ಜನರಿಗೆ ನೀಡಿ ಎಂದು ಸೂಚನೆ ನೀಡಿದ್ದಾರೆ.



Join Whatsapp