Home ಕ್ರೀಡೆ ಐಪಿಎಲ್ 2023ಕ್ಕೆ ಇಂದು ತೆರೆ| ಚೆನ್ನೈ-ಗುಜರಾತ್ ನಡುವೆ ಚಾಂಪಿಯನ್ ಯಾರು?

ಐಪಿಎಲ್ 2023ಕ್ಕೆ ಇಂದು ತೆರೆ| ಚೆನ್ನೈ-ಗುಜರಾತ್ ನಡುವೆ ಚಾಂಪಿಯನ್ ಯಾರು?

ಅಹಮದಾಬಾದ್: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಕೊನೆಯ ದಿನಕ್ಕೆ ಬಂದು ನಿಂತಿದೆ. ಸುಮಾರು ಎರಡು ತಿಂಗಳುಗಳಿಂದ ನಡೆಯುತ್ತಿರುವ ಐಪಿಎಲ್ ಹಬ್ಬಕ್ಕೆ ಇಂದು ತೆರೆ ಬೀಳಲಿದೆ. ಇನ್ನು ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ.

ಇಂದು (ಮೇ 28 ಭಾನುವಾರ) ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಐಪಿಎಲ್ 2023 ಫೈನಲ್​ನಲ್ಲಿ ಮುಖಾಮುಖಿ ಆಗಲಿದೆ. ಹಾಲಿ ಚಾಂಪಿಯನ್ ಮತ್ತು ಮಾಜಿ ಚಾಂಪಿಯನ್ ಕಾದಾಟಕ್ಕೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಚೆನ್ನೈ:

ಸಿಎಸ್​ಕೆ ತಂಡ ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಕ್ವಾಲಿಫೈಯರ್-1 ರಲ್ಲಿ ಇದೇ ಗುಜರಾತ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್​ಗೆ ಪ್ರವೇಶ ಪಡೆದಿತ್ತು. ಚೆನ್ನೈ ಓಪನರ್​ಗಳಾದ ರುತುರಾಯ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಭರ್ಜರಿ ಫಾರ್ಮ್​ನಲ್ಲಿದ್ದು ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಧೋನಿ ಹಾಗೂ ಜಡೇಜಾ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಬೌಲಿಂಗ್​ನಲ್ಲಿ ಸಿಎಸ್​ಕೆ ಪರ ತುಶಾರ್ ದೇಶ್​ಪಾಂಡೆ, ಮಹೀಶಾ ತೀಕ್ಷಣ, ಮತೀಶಾ ಪತಿರಾನ, ಆಕಾಶ್ ಸಿಂಗ್ ಇದ್ದು ಜಡೇಜಾ, ಅಲಿ ಸಾಥ್ ನೀಡುತ್ತಿದ್ದಾರೆ.

ಗುಜರಾತ್:

ಜಿಟಿ ತಂಡ ಇಡೀ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸುತ್ತಾ ಬಂದಿದೆ. ಅದರಲ್ಲೂ ಎಲಿಮಿನೇಟರ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ವೃದ್ದಿಮಾನ್ ಸಾಹ ಹಾಗೂ ಶುಭ್​ಮನ್ ಗಿಲ್ ಸ್ಫೋಟಕ ಆರಂಭ ಒದಗಿಸಿದ್ದಾರೆ. ಗಿಲ್ ಅಂತೂ ಬೊಂಬಾಟ್ ಫಾರ್ಮ್​ನಲ್ಲಿದ್ದು ಹಿಂದಿನ ಮ್ಯಾಚ್​ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು. ಇವರ ಖಾತೆಯಿಂದ ಈ ಬಾರಿ ಒಟ್ಟು ಮೂರು ಸೆಂಚುರಿ ಬಂದಿವೆ. ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ಹಾಗೂ ರಾಹುಲ್ ತೇವಾಟಿಯ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಪಾಂಡ್ಯ ಜೊತೆ ರಶೀದ್ ಖಾನ್ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶ್ವಾ ಲಿಟಲ್ ಹಾಗೂ ನೂರ್ ಅಹ್ಮದ್ ಮಾರಕವಾಗಿದ್ದಾರೆ.

ಸಮಾರೋಪ ಸಮಾರಂಭ:

ಚೆನ್ನೈ-ಗುಜರಾತ್ ರೋಚಕ ಕಾದಾಟ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ 2023 ಸಮಾರೋಪ ಸಮಾರಂಭ ಏರ್ಪಡಿಸಲು ಮುಂದಾಗಿದೆ. ಇದನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಿದೆ. ಇದರಲ್ಲಿ ಖ್ಯಾತ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 6 ಗಂಟೆ ಸುಮಾರಿಗೆ ಆರಂಭವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ, ಮತೀಶ ಪತಿರಾನ, ಆಕಾಶ್ ಸಿಂಗ್, ಡ್ವೈನ್ ಪ್ರಿಟೋರಿಯಸ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆರ್ ಎಸ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಭಗತ್ ವರ್ಮಾ, ನಿಶಾಂತ್ ಸಿಂಧು.

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಜೋಶ್ವಾ ಲಿಟಲ್, ಮೋಹಿತ್ ಶರ್ಮಾ, ಸಾಯಿ ಸುದರ್ಶನ್, ಶ್ರೀಕರ್ ಭರತ್, ಶಿವಂ ಮಾವಿ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ದಾಸುನ್ ಶಾನಕ, ಓಡನ್ ಸ್ಮಿತ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.

Join Whatsapp
Exit mobile version