ಚಿಕ್ಕಮಗಳೂರು : ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರಿಗುಂಟಾದ ಅಪಾರ ಪ್ರಮಾಣದ ನಷ್ಟಗಳನ್ನು ಸರಿದೂಗಿಸಿ, ಸಾಲ ಮನ್ನಾ ಮಾಡುವ ಜೊತೆಗೆ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗೆ ಹಾಕಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅನೇಕ ಗ್ರಾಮಗಳು ಹಾಗೂ ಇಲ್ಲಿನ ಕೃಷಿಕರು ಈ ಬಾರಿಯ ಮಳೆಯಿಂದಾಗಿ ನಲುಗಿದ್ದು, ಜಿಲ್ಲೆಯ ಬಯಲು ಸೀಮೆಭಾಗಗಳಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿ ಹಾಗೂ ಮಲೆನಾಡು ಭಾಗದ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದ್ದು, ಬೆಳೆಗಾರರು ತೀವ್ರತರಹದ ನಷ್ಟವನ್ನು ಅನುಭವಿಸುತ್ತಿದ್ದಾರೆ.
ರೈತರ ಕಷ್ಟವನ್ನು ನೀಗಿಸುವ ನಿಟ್ಟಿನಲ್ಲಿ ರೈತರ ಸಾಲ ಮನ್ನಾ ಜೊತೆಗೆ ಪರಿಹಾರ ಧನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಮತ್ತು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಪರವಾಗಿ ಒತ್ತಾಯಿಸಿದರು.
ಈಗಾಗಲೇ ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿದೆ. ಎಲ್ಲ ನಷ್ಟದ ಮಾಹಿತಿಗಳು ಇಲಾಖೆಗಳ ಬಳಿಯಿದ್ದೂ ದಾಖಲೆಗಳಿಗೆ ರೈತರನ್ನು ಸತಾಯಿಸುತ್ತಿದೆ. ಈ ಬಗ್ಗೆ ಕ್ರಮ ಕೈಗೊಂಡು ಪರಿಹಾರ ಧನವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕೆಂದು ಮನವಿ ಸಲ್ಲಿಸಿದರು.