Home ಕ್ರೀಡೆ ಅರ್ಷ್‌ದೀಪ್ ಭಾರತೀಯನಲ್ಲ, ಖಲಿಸ್ಥಾನಿ ಎಂದ ವಿಕಿಪಿಡಿಯಾ !

ಅರ್ಷ್‌ದೀಪ್ ಭಾರತೀಯನಲ್ಲ, ಖಲಿಸ್ಥಾನಿ ಎಂದ ವಿಕಿಪಿಡಿಯಾ !

ಏಷ್ಯಾಕಪ್‌ನಲ್ಲಿ ಭಾನುವಾರ ನಡೆದಿದ್ದ ಭಾರತ- ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ,  ಕೇವಲ ಒಂದು ಎಸೆತ ಬಾಕಿ ಇರುವಂತೆ ಪಾಕ್‌ 5 ವಿಕೆಟ್‌ಗಳ ಸ್ಮರಣೀಯ ಗೆಲುವು ದಾಖಲಿಸಿತ್ತು. ಪಂದ್ಯದ ಮಹತ್ವದ ಘಟ್ಟದಲ್ಲಿ ಕ್ಯಾಚ್‌ ಕೈಚೆಲ್ಲಿದ್ದ ಅರ್ಷ್‌ದೀಪ್‌ ಸಿಂಗ್‌, ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರವಿ ಬಿಷ್ಣೋಯ್‌ ಎಸೆದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಅರ್ಷ್‌ದೀಪ್‌ ಸಿಂಗ್‌, 1 ರನ್‌ ಗಳಿಸಿದ್ದ ಆಸಿಫ್‌ ಅಲಿಯ ಸುಲಭ ಕ್ಯಾಚ್‌ ಚೆಲ್ಲಿದ್ದರು. ಇದರ ಲಾಭ ಪಡೆದ ಅಲಿ, ಆ ಬಳಿಕ 1 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿ ಪಾಕಿಸ್ತಾ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.

ಅರ್ಷ್‌ದೀಪ್‌ ವಿರುದ್ಧ ಮೈದಾನದಲ್ಲೇ ರೋಹಿತ್‌ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ವಿಕಿಪೀಡಿಯಾದಲ್ಲಿ ಅರ್ಷದೀಪ್​ ಸಿಂಗ್​ ಕುರಿತಾದ ಸುಳ್ಳು ಮಾಹಿತಿಗಳನ್ನು ಹಾಕಿರುವ ಕಿಡಿಗೇಡಿಗಳು, ಪಂಜಾಬ್​ನ ಅರ್ಷದೀಪ್​ ಪ್ರತ್ಯೇಕತಾವಾದ ಬಯಸುವ ಗುಂಪಾದ ಖಲಿಸ್ಥಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಂಬಿಸಿದ್ದರು.

ಅರ್ಷ್‌ದೀಪ್‌ ಸಿಂಗ್‌ ಅವರ ಮಾಹಿತಿಯನ್ನು ಒಳಗೊಂಡ ಪುಟದಲ್ಲಿ ಭಾರತ ಎಂದಿದ್ದ ಜಾಗದಲ್ಲಿ ಪಂಜಾಬ್​ ಪ್ರತ್ಯೇಕತೆಯನ್ನು ಬಯಸುವ, ಅಸ್ತಿತ್ವದಲ್ಲೇ ಇಲ್ಲದ ಖಲಿಸ್ಥಾನ್‌ ಎಂದು ಬರೆಯಲಾಗಿದೆ. ಹೀಗೆ ತಿದ್ದಲ್ಪಟ್ಟ ಅರ್ಷ್‌ದೀಪ್ ಸಿಂಗ್ ವಿಕಿಪಿಡಿಯಾ ಪುಟ ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಭಾರತದ ಬದಲಿಗೆ ಖಲಿಸ್ಥಾನ್​ ಎಂದು ಬರೆದ ಪದವನ್ನು ಗುರುತಿಸಿದ ವಿಕಿಪೀಡಿಯಾ 15 ನಿಮಿಷದಲ್ಲಿ ಅಳಿಸಿ ಹಾಕಿದೆ.

ಆದರೆ ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು,  ಈ ಕುರಿತು ಖುದ್ದು ಹಾಜರಾಗಿ ವಿವರಣೆ ನೀಡುವಂತೆ, ಕೇಂದ್ರ ಐಟಿ ಸಚಿವಾಲಯ, ವಿಕಿಡಿಯಾ ಕಾರ್ಯನಿರ್ವಾಹಕರಿಗೆ  ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.

ಅರ್ಷ್‌ದೀಪ್‌ಗೆ ಕೊಹ್ಲಿ ಬೆಂಬಲ: ಭಾರತದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಯುವ ಬೌಲರ್‌, ಅರ್ಷದೀಪ್​ ಸಿಂಗ್ ಬೆಂಬಲಕ್ಕೆ ನಿಂತಿರುವ ವಿರಾಟ್​ ಕೊಹ್ಲಿ‌, ಒತ್ತಡದಲ್ಲಿ ತಪ್ಪು ಮಾಡುವುದು ಸಹಜ ಎಂದು ಬೆನ್ನು ತಟ್ಟಿದ್ದಾರೆ.

Join Whatsapp
Exit mobile version