Home ಕ್ರೀಡೆ ಮಂಡಿಯೂರಲು ಒಪ್ಪದ ಡಿ ಕಾಕ್: ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್’ ನಿಲುವಿನಲ್ಲಿ ಬದಲಾವಣೆಯಿಲ್ಲ..!

ಮಂಡಿಯೂರಲು ಒಪ್ಪದ ಡಿ ಕಾಕ್: ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್’ ನಿಲುವಿನಲ್ಲಿ ಬದಲಾವಣೆಯಿಲ್ಲ..!


ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ಸೋತವರ ನಡುವಿನ ಕದನದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ’ಗೆ ಆಹ್ವಾನಿಸಿತ್ತು. ಆರಂಭಿಕ ಇರ್ವಿನ್ ಲೂವಿಸ್ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತ್ತು. ಸುಲಭ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಕೇವಲ ಎರಡು ವಿಕೆಟ್ ನಷ್ಟದಲ್ಲಿ 18.2 ಓವರ್’ಗಳಲ್ಲಿ ಗುರಿ ತಲುಪಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.


ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ಆಡದೇ ಇರುವುದು ಬಹಳಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿದ್ದರೂ ಸಹ ಡಿ ಕಾಕ್ ಯಾಕೆ ಈ ಪಂದ್ಯದಿಂದ ಹೊರಗುಳಿದಿದ್ದರು ಎಂಬುದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಇನ್ನೂ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ.


ಟಾಸ್ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡ ನಾಯಕ ಟೆಂಬಾ ಬವುಮಾ, ವೈಯಕ್ತಿಕ ಕಾರಣಗಳಿಂದಾಗಿ ಸ್ವತಃ ಕ್ವಿಂಟನ್ ಡಿ ಕಾಕ್ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ ಮೂಲಗಳ ಪ್ರಕಾರ ಕ್ವಿಂಟನ್ ಡಿ ಕಾಕ್ ಹೊರಗುಳಿಯಲು ಕಾರಣವಾಗಿದ್ದು ‘ಬ್ಲ್ಯಾಕ್ ಲೀವ್ಸ್ ಮಾಟರ್ಸ್’..!


ವರ್ಣಬೇಧ ನೀತಿಯ ವಿರುದ್ಧ ಸಂದೇಶ ಸಾರುವ ಸಲುವಾಗಿ ಪಂದ್ಯ ಆರಂಭಕ್ಕೂ ಮೊದಲು ಆಟಗಾರರು ಮೊಣಕಾಲೂರಿ ‘ಬ್ಲ್ಯಾಕ್ ಲೀವ್ಸ್ ಮಾಟರ್ಸ್’ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಾರೆ. ಈ ಬಾರಿಯ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೇರಿದಂತೆ ಎಲ್ಲಾ ತಂಡಗಳು ಈ ಅಭಿಯಾನದಲ್ಲಿ ಭಾಗವಾಗಿದೆ. ಆದರೆ ಬ್ಲ್ಯಾಕ್ ಲೀವ್ಸ್ ಮಾಟರ್ಸ್’ ಅಭಿಯಾನಕ್ಕೆ ಕ್ವಿಂಟನ್ ಡಿ ಕಾಕ್ ಈ ಹಿಂದೆಯೇ ತಮ್ಮ ಅಸಮ್ಮತಿ ಸೂಚಿಸಿದ್ದರು.


ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಮುನ್ನಾದಿನ ಸೋಮವಾರ ರಾತ್ರಿ ಬ್ಲ್ಯಾಕ್ ಲೀವ್ಸ್ ಮಾಟರ್ಸ್’ ಕುರಿತಂತೆ ಎಲ್ಲಾ ಆಟಗಾರರಿಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಮಿತಿ ಸೂಚನೆ ನೀಡಿತ್ತು. ಆದರೆ ಕ್ವಿಂಟನ್ ಡಿ ಕಾಕ್ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಇದೇ ಕಾರಣಕ್ಕಾಗಿ ಮಂಗಳವಾರದ ಪಂದ್ಯದಿಂದ ಕ್ವಿಂಟನ್ ಡಿ ಕಾಕ್ ಹೊರಗುಳಿದರು ಎನ್ನಲಾಗುತ್ತಿದೆ.


ಈ ಹಿಂದೆ ಸೈಂಟ್ ಲೂಸಿಯಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಎಲ್ಲರೂ ಮೊಣಕಾಲೂರಿ ಕುಳಿತಾಗ ಕ್ವಿಂಟನ್ ಡಿ ಕಾಕ್ ಮಾತ್ರ ನಿಂತೇ ಇದ್ದರು. ಇದರ ಬಗ್ಗೆ ಪ್ರಶ್ನಿಸಿದ ಪತ್ರಕರ್ತರ ಬಳಿ, ಇದು ನನ್ನ ವೈಯಕ್ತಿಕ ನಿರ್ಧಾರ. ಯಾರೂ ಕೂಡ ಯಾವದೇ ವಿಷಯದಲ್ಲಿ ಯಾರನ್ನೂ ಒತ್ತಾಯಮಾಡಬಾರದು ಎಂಬುದು ನನ್ನ ನಿಲುವಾಗಿದೆ ಎಂದು ಉತ್ತರಿಸಿದ್ದರು.

Join Whatsapp
Exit mobile version