Home ಟಾಪ್ ಸುದ್ದಿಗಳು ಕೋವಿಡ್‌ ಸೋಂಕಿನ ಮೂಲದ ಕುರಿತ ಮುಂದಿನ ಹಂತದ ತನಿಖೆ ಅಮೆರಿಕದಲ್ಲಿ ನಡೆಯಲಿ : ಚೀನಾದ ತಜ್ಞರ...

ಕೋವಿಡ್‌ ಸೋಂಕಿನ ಮೂಲದ ಕುರಿತ ಮುಂದಿನ ಹಂತದ ತನಿಖೆ ಅಮೆರಿಕದಲ್ಲಿ ನಡೆಯಲಿ : ಚೀನಾದ ತಜ್ಞರ ಆಗ್ರಹ

ಶಾಂಘೈ : ಕೋವಿಡ್‌ ವೈರಸ್‌ ನ ಮೂಲ ಯಾವುದೆಂಬುದರ ಮುಂದಿನ ಹಂತದ ತನಿಖೆ ಅಮೆರಿಕದಲ್ಲಿ ನಡೆಯಲಿ ಎಂದು ಚೀನಾದ ಹಿರಿಯ ತಜ್ಞರೊಬ್ಬರು ಹೇಳಿದ್ದಾರೆ. 2019ರ ಡಿಸೆಂಬರ್‌ ನಲ್ಲಿ ಕೋವಿಡ್‌ 19 ಮೊದಲ ಪ್ರಕರಣ ವರದಿಯಾಗುವುದಕ್ಕೂ ಮೊದಲು ಅಮೆರಿಕದಲ್ಲಿ ವೈರಸ್‌ ಹರಡಿರುವ ಬಗ್ಗೆ ಪರಿಶೀಲನೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೊದಲ ಅಧಿಕೃತ ಕೋವಿಡ್‌ ಪ್ರಕರಣ ಪತ್ತೆಯಾಗುವುದಕ್ಕೂ ಮೊದಲು ಕೋವಿಡ್‌ 19ಗೆ ಕಾರಣವಾದ ಸಾರ್ಸ್‌ ಕೋವ್-‌2 ವೈರಸ್‌ ಅಮೆರಿಕದ ವಿವಿಧ ಐದು ರಾಜ್ಯಗಳಲ್ಲಿ ಕನಿಷ್ಠ ಏಳು ಮಂದಿಯಲ್ಲಿ ಪತ್ತೆಯಾಗಿರುವ ಬಗ್ಗೆ ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಅವರು ಈ ಒತ್ತಾಯ ಮಾಡಿದ್ದಾರೆ. ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧನಾ ವರದಿ ಈ ವಾರ ಪ್ರಕಟವಾಗಿದೆ.

ಚೀನಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜೆಂಗ್‌ ಗುವಾಂಗ್‌ ಸರಕಾರಿ ಮಾಲಕತ್ವದ ಮ್ಯಾಗಝಿನ್‌ ಗ್ಲೋಬಲ್‌ ಟೈಮ್ಸ್‌ ಗೆ ನೀಡಿರುವ ಹೇಳಿಕೆಯಲ್ಲಿ ಸೋಂಕಿನ ಮೂಲದ ತನಿಖೆ ಅಮೆರಿಕದತ್ತ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಂಕ್ರಾಮಿಕತೆ ಹರಡಿದ ಆರಂಭದಲ್ಲಿ ಜನರನ್ನು ಪರೀಕ್ಷಿಸಲು ನಿಧಾನ ಮಾಡಿದ್ದ ಮತ್ತು ಹಲವಾರು ಜೈವಿಕ ಪ್ರಯೋಗಾಲಯಗಳು ಇರುವ ಅಮೆರಿಕದತ್ತ ತನಿಖೆಯ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.

ಆ ದೇಶದ ಎಲ್ಲಾ ಜೈವಿಕ ಶಸ್ತ್ರಗಳು ಪರಿಶೀಲನೆಗೊಳಪಡೆಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್‌ 19 ಸೋಂಕು ಆರಂಭಕ್ಕೆ ಹಲವು ಮೂಲಗಳಿರುವುದರಿಂದ, ಈ ಕುರಿತ ತನಿಖೆಗೆ ವಿಶ್ವಸಂಸ್ಥೆಯೊಂದಿಗೆ ಇತರ ರಾಷ್ಟ್ರಗಳು ಸಹಕರಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್‌ ಹೇಳಿದ್ದಾರೆ.

ಚೀನಾದ ವಹಾನ್‌ ನಲ್ಲಿ ಕೋವಿಡ್‌ 19 ಸೋಂಕು ಮೊದಲು ಹರಡಿದ್ದು ಎಂಬ ಆರೋಪಗಳಿವೆ. ಈ ಬಗ್ಗೆ ತನಿಖೆಗೆ ಅಮೆರಿಕವೂ ಒತ್ತಾಯಿಸಿತ್ತು. ಒಂದು ಅಧ್ಯಯನದ ಪ್ರಕಾರ ಸಾರ್ಸ್‌ ಕೋವ್‌ – 2 ಯುರೋಪ್‌ ನಲ್ಲಿ ಸೆಪ್ಟಂಬರ್‌ ನಲ್ಲೇ ಇದ್ದ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

Join Whatsapp
Exit mobile version