ಲಕ್ನೋ: ಉತ್ತರಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಝ್ವಿ ಹಲವಾರು ಬಾರಿ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಆರೋಪಿಸಿರುವ ಹಿನ್ನೆಲೆಯಲ್ಲಿ ರಿಝ್ವಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಲಕ್ನೋ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಸಂತ್ರಸ್ತೆಯ ಮನವಿಯ ವಿಚಾರಣೆಗೆ ಹೆಚ್ಚುವರಿ ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ಎ.ಕೆ.ಶ್ರೀವಾಸ್ತವ ಆದೇಶಿಸಿದ್ದಾರೆ. ಎಫ್‌ಐಆರ್ ಪ್ರತಿಯನ್ನು ಮೂರು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸದಾತ್‌ಗಂಜ್ ಪೊಲೀಸರಿಗೆ ಅವರು ನಿರ್ದೇಶನ ನೀಡಿದ್ದಾರೆ.
ತನ್ನ ಪತಿ ರಿಝ್ವಿಯ ಚಾಲಕನಾಗಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಒಂದು ದಿನ ತನ್ನ ಗಂಡನನ್ನು ದೂರ ಕಳುಹಿಸಿ ರಾತ್ರಿ ಮನೆಗೆ ಬಂದು ರಿಝ್ವಿ ಅತ್ಯಾಚಾರ ಮಾಡಿದ್ದಾನೆ. ನಂತರ ನಗ್ನ ಫೋಟೋಗಳನ್ನು ತೆಗೆದುಕೊಂಡು ಅತ್ಯಾಚಾರ ನಡೆಸಿರುವುದನ್ನು ಬಹಿರಂಗಪಡಿಸಿದರೆ ನಗ್ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕುರ್‌ಆನ್‌ನಿಂದ ಕೆಲವು ಸೂಕ್ತಗಳನ್ನು ತೆಗೆದುಹಾಕುವಂತೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದ ರಿಝ್ವಿ ವಿವಾದವಾಗುತ್ತಿದ್ದಂತೆ ತನ್ನ ಮನವಿಯನ್ನು ಹಿಂಪಡೆದಿದ್ದನು.