ಮಡಿಕೇರಿ: ಇಲ್ಲಿನ ಶನಿವಾರಸಂತೆಯ ಕ್ರೈಸ್ತರ ಪಾಲಂ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ನಿರತರಾಗಿದ್ದಾಗ ಬಜರಂಗ ದಳದ ಕಾರ್ಯಕರ್ತರು ಏಕಾಏಕಿ ನುಗ್ಗಿ ಅಲ್ಲಿದ್ದ ಕ್ರೈಸ್ತ ಧರ್ಮಗುರು ಸೇರಿದಂತೆ ಹಲವರಿಗೆ ಹಲ್ಲೆ ನಡೆಸಿ, ಬೈಬಲ್ ಗ್ರಂಥ ಕಿತ್ತುಕೊಂಡು ಹೋಗಿರುವ ಘಟನೆ ಭಾನುವಾರ ನಡೆದಿದೆ.
ಫಾದರ್ ಮಂಜುನಾಥ್ ಮತ್ತು ಇತರ ಕೆಲವು ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ.
ಮಂಜುನಾಥ್ ಅವರು ಕಳೆದ 30 ವರ್ಷಗಳಿಂದ ಈ ಪ್ರದೇಶದಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ. ಕಳೆದ 7 ವರ್ಷಗಳಿಂದ ಸ್ವಂತ ಮನೆಯಲ್ಲೇ ಪ್ರಾರ್ಥನೆ ನಡೆಸುತ್ತಿದ್ದರು. ಸುತ್ತಮುತ್ತ ಹಲವು ನಿವಾಸಿಗಳು ಇಲ್ಲಿಗೆ ಆಗಮಿಸುತ್ತಿದ್ದರು. ಆದರೆ ನಿನ್ನೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಭಕ್ತಾದಿಗಳು, ಫಾದರ್ , ಅವರ ಪತ್ನಿ, ಪುತ್ರಿಯ ಮೇಲೂ ಹಲ್ಲೆ ನಡೆಸಿದ್ದಾರೆ. ರಕ್ಷಣೆಗೆ ಬರಬೇಕಾದ ಪೊಲೀಸರು ಕೂಡ ಬಜರಂಗದಳದವರ ರೀತಿಯಲ್ಲಿಯೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಬಜರಂಗದಳದವರು ಮತ್ತು ಪೊಲೀಸರು ಬಂದಾಗ ಘಟನೆಯನ್ನು ವೀಡಿಯೋ ಮಾಡುತ್ತಿದ್ದ ಯುವತಿಗೆ ಹಲ್ಲೆ ನಡೆಸಿದ ಪೊಲೀಸರು ಮೊಬೈಲ್ ಕಿತ್ತುಕೊಂಡು ಅವಾಚ್ಯವಾಗಿ ಬೈದಿದ್ದಾರೆ. ಈ ಸಂಬಂಧದ ವೀಡಿಯೋ ವೈರಲ್ ಆಗಿದೆ.
ಈ ಬಗ್ಗೆ ವಿಡಿಯೋ ಮೂಲಕ ವಿವರ ನೀಡಿರುವ ಫಾದರ್ ಅವರ ಪುತ್ರಿ ಅನುಶಾ, ಭಾನುವಾರ 11.45ರ ಸುಮಾರಿಗೆ 10 ಮಂದಿ ಬಜರಂಗದಳದವರು ಪ್ರಾರ್ಥನಾ ಸಭೆಗೆ ಬಂದು ಕುಂಕುಮ ಏಕೆ ಹಾಕುತ್ತಿಲ್ಲ, ಯಾಕಾಗಿ ಮತಾಂತರ ಮಾಡುತ್ತಿದ್ದೀರಿ ಎಂದು ಪ್ರಾರ್ಥನೆ ಅಡ್ಡಿ ಪಡಿಸಿದರು. ಆಗ ತಂದೆ ಅವರೊಂದಿಗೆ ಸಾವಧಾನದಿಂದಲೇ ಈಗ ಪ್ರಾರ್ಥನೆ ನಡೆಯುತ್ತಿದೆ. ಬಳಿಕ ಮಾತನಾಡೋಣ ಎಂದು ಹೇಳಿದರು. ಆದರೆ ಬಜರಂಗದಳದವರು ಗದ್ದಲವೆಬ್ಬಿಸಿ, ಬೈಬಲ್ ಅನ್ನು ಕೂಡ ಕಿತ್ತುಕೊಂಡಿದ್ದಾರೆ. ಇದುವರೆಗೆ ಅದನ್ನು ಹಿಂದಿರುಗಿಸಿಲ್ಲ. ಅಲ್ಲಿದ್ದ ಭಕ್ತರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ವಿಷಯ ತಿಳಿದ ಪೊಲೀಸರು ಬಂದು ನಮ್ಮ ಮೇಲೆಯೇ ಗೂಂಡಾಗಿರಿ ಮಾಡಿದರು. ಕೆಲವು ಭಕ್ತಾದಿಗಳನ್ನು ಬಲವಂತವಾಗಿ ಅಲ್ಲಿಂದ ಓಡಿಸಿದರು. ವೀಡಿಯೋ ಮಾಡುತ್ತಿದ್ದ ನನ್ನ ಮೇಲೆ ಹರಿಹಾಯ್ದು ಮೊಬೈಲ್ ಕಿತ್ತುಕೊಂಡರು. ಬಳಿಕ ನನ್ನ ತಂದೆಯನ್ನು ಠಾಣೆಗೆ ಕರೆದೊಯ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಫಾದರ್ ಅವರ ಪತ್ನಿ ಗಿರಿಜಾ ಮಾತನಾಡಿ, ಭಾನುವಾರ ಬೆಳಗ್ಗೆ 11 ಗಂಟೆ ವೇಳೆ ಆರ್ ಎಸ್ ಎಸ್ ನವರು ನುಗ್ಗಿ ಕೆಟ್ಟದಾಗಿ ಬೈದು, ಬೈಬಲ್ ಕಿತ್ತುಕೊಂಡಿದ್ದಾರೆ, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಸ್ತುತ ನ್ಯೂಸ್ ನೊಂದಿಗೆ ಮಾತನಾಡಿರುವ ಫಾದರ್ ಫ್ರೆಡ್ಡಿ, ಪಾಲಂ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಆದರೆ ಮತಾಂತರ ನಡೆಯುತ್ತಿದೆ ಎಂದು ನೆಪವೊಡ್ಡಿ ದಾಳಿ ನಡೆಸಲಾಗಿದೆ. ಕಾನೂನು ಪ್ರಕಾರ ನಡೆದುಕೊಳ್ಳಬೇಕಾದ ಪೊಲೀಸರು ಸಂತ್ರಸ್ತರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ. ಆದ್ದರಿಂದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗುವುದು. ಅಲ್ಲಿಯೂ ಪ್ರಕರಣ ದಾಖಲಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಸ್ಪಷ್ಟನೆಗಾಗಿ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಶನಿವಾರ ಸಂತೆ ಇನ್ಸ್ ಪೆಕ್ಟರ್ ಅವರನ್ನು ಸಂಪರ್ಕಿಸಲು “ಪ್ರಸ್ತುತ” ಪ್ರಯತ್ನಿಸಿತು. ಆದರೆ ಅವರಿಬ್ಬರೂ ಕರೆ ಸ್ವೀಕರಿಸಲಿಲ್ಲ.