Home ಟಾಪ್ ಸುದ್ದಿಗಳು ಕಾಮಗಾರಿಯ ಬಿಲ್ ಬಿಡುಗಡೆ ಮಾಡದಿದ್ದರೆ ಸಿಎಂ ನಿವಾಸಕ್ಕೆ ಮುತ್ತಿಗೆ: ಗುತ್ತಿಗೆದಾರರ ಸಂಘ ಎಚ್ಚರಿಕೆ

ಕಾಮಗಾರಿಯ ಬಿಲ್ ಬಿಡುಗಡೆ ಮಾಡದಿದ್ದರೆ ಸಿಎಂ ನಿವಾಸಕ್ಕೆ ಮುತ್ತಿಗೆ: ಗುತ್ತಿಗೆದಾರರ ಸಂಘ ಎಚ್ಚರಿಕೆ

ಬೆಂಗಳೂರು: ಕಾಮಗಾರಿಗಳನ್ನು ಪೂರ್ಣಗೊಳಿಸಿ ಎರಡು ವರ್ಷಗಳು ಕಳೆದಿದ್ದರೂ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಸುಮಾರು 22 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಬಿಡುಗಡೆಯಾಗಬೇಕಿದೆ. ಹಾಗಾಗಿ, ಕಾಲಮಿತಿಯೊಳಗೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಪ್ರೆಸ್ ಕ್ಲಬ್ ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ, ನೀರಾವರಿ ಹಾಗೂ ಬಿಬಿಎಂಪಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳು ನಡೆಯುತ್ತಿದ್ದು, ಹಣ ಬಿಡುಗಡೆಯಲ್ಲಿ ಜೇಷ್ಠತೆಯನ್ನು ಪಾಲಿಸುತ್ತಿಲ್ಲ. ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಸೂಚಿಸುವವರಿಗೆ ಮಾತ್ರ ಬಾಕಿ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ. ಅಧಿಕಾರಿಗಳು ಶೇ.7 ರಷ್ಟು ಹಣ ಕೊಟ್ಟರೆ ಬಿಲ್ ಬರೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನು ಹುಬ್ಬಳ್ಳಿ ಮತ್ತಿತರ ಜಿಲ್ಲೆಗಳಲ್ಲಿ ಶೇ.10 ರಷ್ಟು ಕೊಟ್ಟರೆ ಬಿಲ್ ಮಾಡುವುದಾಗಿ ನೇರವಾಗಿ ಹೇಳುತ್ತಿದ್ದಾರೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಅವರಿಗೆ ಬೇಕಾದವರಿಗೆ ಮಾತ್ರ ಬಿಲ್ ಮಾಡುತ್ತಾರೆ ಎಂದು ಆರೋಪಿಸಿದರು.


ಲೋಕೋಪಯೋಗಿ, ನೀರಾವರಿ ಹಾಗೂ ಬಿಬಿಎಂಪಿಯಲ್ಲೇ ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಮೊತ್ತವೇ ಸುಮಾರು 10 ಸಾವಿರ ಕೋಟಿ ರೂ. ಮೀರಿದೆ. ಲೋಕೋಪಯೋಗಿ ಇಲಾಖೆಯೊಂದೇ ಸುಮಾರು 5 ಸಾವಿರ ಕೋಟಿ ರೂ. ಇದೆ. ಇನ್ನು ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆ ಸುಮಾರು 8 ಸಾವಿರ ಕೋಟಿ ರೂ. ಹಾಗೂ ಬಿಬಿಎಂಪಿಯಲ್ಲಿ ಸುಮಾರು 3 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ವಿವರಿಸಿದರು.
ಕಳೆದ ವರ್ಷ ಏಪ್ರಿಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ನಿರಂತರವಾಗಿ ಪತ್ರವನ್ನು ಬರೆಯುತ್ತಲೇ ಇದ್ದರೂ ಕೇವಲ ಭರವಸೆ ಹೊರತು ಬಾಕಿ ಮೊತ್ತ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕೂಡಲೇ ಹಂತ ಹಂತವಾಗಿ ಹಿರಿತನದ ಆಧಾರದ ಮೇಲೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇವೆ. ಒಂದು ವೇಳೆ ಸರ್ಕಾರಿ ಬಾಕಿ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಮತ್ತು ಅಂತಿಮವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
40 ಫರ್ಸೆಂಟ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾರಣ ಈ ಪ್ರಕರಣ ನ್ಯಾಯಾಲಯದಲ್ಲಿ ಈ ವಿಷಯ ಕುರಿತು ತಡೆಯಾಜ್ಞೆ ಇರುವುದರಿಂದ ಇದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ಈ ಬಗ್ಗೆ ನಿರಂತರ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.


ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. ಒಮ್ಮೆ ಚುನಾವಣೆ ಘೋಷಣೆ ಆದರೆ ಸಬೂಬುಗಳನ್ನು ಹೇಳಲು ಸರಕಾರಕ್ಕೆ ಅವಕಾಶಗಳು ಲಭ್ಯವಾಗುತ್ತವೆ.ಆದ್ದರಿಂದ ಚುನಾವಣೆಗೆ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ತ್ವರಿತವಾಗಿ ಗುತ್ತಿಗೆದಾರರ ಬಾಕಿ ಮೊತ್ತವನ್ನು ಹಿರಿತನದ ಆಧಾರದಲ್ಲಿ ಬಿಡುಗಡೆ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಹೊಸ ತಂತ್ರಜ್ಞಾನ ರೂಪಿಸಿ: ಕಾಮಗಾರಿಗಳು ಪೂರ್ಣಗೊಂಡ ನಂತರ ಬಿಲ್ ಪಾವತಿಗೆ ಹೊಸ ತಂತ್ರಜ್ಞಾನವನ್ನು ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸಬೇಕು. ಆಯಾ ಇಲಾಖೆಗಳ ಕಚೇರಿಗಳಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ನಾಮ ಫಲಕದಲ್ಲಿ ಹಾಕಬೇಕು ಮತ್ತು ಎಷ್ಟು ಮೊತ್ತ ಬಾಕಿ ಇದೆ, ಎಷ್ಟು ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನೂ ಪ್ರಕಟ ಮಾಡಬೇಕು. ಆಗ ಮಾತ್ರ ಪಾರದರ್ಶಕತೆಯನ್ನು ತರಲು ಸಾಧ್ಯವಾಗುತ್ತದೆ. ಎಲ್ಲ ಇಲಾಖೆಗಳ ಪೂರ್ಣಗೊಳಿಸಿದ, ಚಾಲ್ತಿಯಲ್ಲಿರುವ ಮತ್ತು ಮುಂಬರುವ ಕಾಮಗಾರಿಗಳ ಮೊತ್ತದ ಅಂದಾಜು ಪಟ್ಟಿಯನ್ನು ತಯಾರಿಸಿ ಬಜೆಟ್’ನಲ್ಲಿ ಪ್ರತ್ಯೇಕ ಅನುದಾನವನ್ನು ನಿಗದಿಪಡಿಸುವುದು ಉತ್ತಮ. ಅನುದಾನದ ಲಭ್ಯತೆಯನ್ನು ಆಧರಿಸಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದರೆ ಸರಕಾರ ಮತ್ತು ಗುತ್ತಿಗೆದಾರರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಸರಕಾರಕ್ಕೂ ಹೊರೆ ತಪ್ಪುತ್ತದೆ. ಮುಖ್ಯಮಂತ್ರಿಗಳೇ, ಗುತ್ತಿಗೆದಾರರ ಬಳಿ ಹಣದ ಮಂತ್ರದಂಡ ಇರುವುದಿಲ್ಲ. ಅವರೂ ಸಹ ಶ್ರೀಸಾಮಾನ್ಯರಲ್ಲಿ ಒಬ್ಬರಾಗಿರುತ್ತಾರೆ. ಎಲ್ಲ ಹುದ್ದೆಗಳಂತೆ ಗುತ್ತಿಗೆದಾರ ಕೆಲಸವೂ ಒಂದು ಹುದ್ದೆ ಅಷ್ಟೇ. ಗುತ್ತಿಗೆದಾರರು ಬ್ಯಾಂಕ್, ಮತ್ತು ಖಾಸಗಿಯವರಿಂದ ಸಾಲ ತಂದು ಬಡ್ಡಿ ಕಟ್ಟುತ್ತಿರುತ್ತಾರೆ. ಕಚ್ಚಾವಸ್ತುಗಳ ಪೂರೈಕೆದಾರರಿಗೆ, ಕಾರ್ಮಿಕರಿಗೆ ವೇತನ ಪಾವತಿಸಬೇಕಾಗಿರುತ್ತದೆ. ಎರಡು ಮೂರು ವರ್ಷಗಳ ಕಾಲ ಬಾಕಿ ಉಳಿಸಿಕೊಂಡರೆ ಗುತ್ತಿಗೆದಾರರು ಬದುಕುವುದಾದರೂ ಹೇಗೆ? ಸಾಲಗಾರರ ಕಾಟ ತಡೆಯಲಾರದೆ, ಕಮೀಷನ್ ಕೊಡಲಾಗದೆ ಸಮಾಜಕ್ಕೆ ಅಂಜಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಕಣ್ಣ ಮುಂದಿವೆ. ಮನೆ ಆಸ್ತಿ,ಪಾಸ್ತಿ ಮಾರಾಟ ಮಾಡಿಕೊಂಡು ಬೀದಿ ಪಾಲಾಗಿರುವ ಉದಾಹರಣೆಗಳು ಇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ , ಉಪಾಧ್ಯಕ್ಷ ಆರ್. ಅಂಬಿಕಾಪತಿ ಮತ್ತಿರರರು ಹಾಜರಿದ್ದರು.

Join Whatsapp
Exit mobile version