Home ಟಾಪ್ ಸುದ್ದಿಗಳು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡದಿದ್ದರೆ ನಿರಂತರ ಹೋರಾಟ: ಸಿದ್ದರಾಮಯ್ಯ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡದಿದ್ದರೆ ನಿರಂತರ ಹೋರಾಟ: ಸಿದ್ದರಾಮಯ್ಯ

►ಬಿಜೆಪಿ, ಆರ್.ಎಸ್.ಎಸ್ ನವರು ಒಂದು ದಿನವೂ ರಾಷ್ಟ್ರ ಧ್ವಜಕ್ಕೆ ಗೌರವ ಕೊಟ್ಟವರಲ್ಲ

ಬೆಂಗಳೂರು: ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ನಾಳೆ ಸದನ ಆರಂಭಕ್ಕೂ ಮೊದಲು ಸಚಿವ ಸ್ಥಾನದಿಂದ ಕೈಬಿಟ್ಟು, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟವನ್ನು ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಕಚೇರಿಯಲ್ಲಿ ಕೆ.ಸಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.  

ಈ ತಿಂಗಳ 9 ನೇ ತಾರೀಖಿನಂದು ಸಚಿವ ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇಂದಲ್ಲ ನಾಳೆ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ. ಈ ಮಾತು ಹೇಳುವ ಹಿಂದಿನ ದಿನ ಶಿವಮೊಗ್ಗದಲ್ಲಿ ಬಿಜೆಪಿ, ಸಂಘ ಪರಿವಾರದಿಂದ ಪ್ರಚೋದನೆಗೊಂಡ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದರು. ರಾಷ್ಟ್ರಪತಿಗಳಿಂದ ಹಿಡಿದು ಒಬ್ಬ ಶಾಸಕನ ವರೆಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಂವಿಧಾನವನ್ನು ಎತ್ತಿಹಿಡಿಯುತ್ತೇನೆ ಎಂದು ಪ್ರಮಾಣ ಸ್ವೀಕರಿಸುತ್ತಾರೆ. ಅಂತಹುದರಲ್ಲಿ ಒಬ್ಬ ಮಂತ್ರಿಯಾಗಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಂತ ಹೇಳಿಕೆ ಕೊಡುವುದು ಅಕ್ಷಮ್ಯ ಅಪರಾಧ. ಅವರ ಈ ಹೇಳಿಕೆಯನ್ನು ಬಿಜೆಪಿಯ ಯಾರೊಬ್ಬರೂ ಖಂಡಿಸಿಲ್ಲ. ಮಾಧುಸ್ವಾಮಿ ಸದನದಲ್ಲಿ ಮಧ್ಯ ಪ್ರವೇಶಿಸಿ ಈಶ್ವರಪ್ಪ ನವರದ್ದು ಹೇಳಿಕೆಯಲ್ಲ, ಮಾಧ್ಯಮದೊಂದಿಗಿನ ಚರ್ಚೆ ಎಂಬಂತೆ ಹೇಳಿದರು. ಜೊತೆಗೆ ಇದು ನಿಯಮ 60  ರಡಿ ಗೊತ್ತುವಳಿ ಸೂಚನೆ ಮಂಡಿಸಲು ಬರಲ್ಲ ಎಂದು ಹೇಳಿದರು. ಇದೇ ವೇಳೆ ಈಶ್ವರಪ್ಪ ಅವರು ನಮ್ಮ ಪಕ್ಷದ ಅಧ್ಯಕ್ಷರ ತಂದೆ, ತಾಯಿ, ಕುಟುಂಬದವರ ಬಗ್ಗೆ ಮಾತನಾಡಿದ್ದು ಅವರ ಘನತೆಯನ್ನು ತೋರಿಸುತ್ತದೆ. ಈಶ್ವರಪ್ಪ ಅವರಿಗೆ ಸಂಸದೀಯ ಭಾಷೆಯೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಗೌರವಕ್ಕೆ ಧಕ್ಕೆ ಕಾಯ್ದೆಯಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಬೇರೆ ಎಲ್ಲಿಯೇ ಆದರೂ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದರೆ, ಹಾಳು ಮಾಡಿದರೆ, ಚ್ಯುತಿ ತಂದರೆ ಅಥವಾ ತಮ್ಮ ಹೇಳಿಕೆ, ಬರಹ ಅಥವಾ ಕಾರ್ಯದ ಮೂಲಕ ಅಪಮಾನ ಮಾಡಿದರೆ ಅದು ಅಪರಾಧ, ಈ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಹೇಳಿದೆ. ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೆ ಅಪಮಾನ ಮಾಡಿದರೆ ಅದು ದೇಶದ್ರೋಹವಾಗುತ್ತದೆ ಎಂದು ಹೇಳಿದರು.

ದೆಹಲಿಯ ಕೆಂಪುಕೋಟೆಯಲ್ಲಿ ರೈತರು ತಮ್ಮ ರೈತ ಧ್ವಜವನ್ನು ರಾಷ್ಟ್ರ ಧ್ವಜದ ಕೆಳಗೆ ಹಾರಿಸಿದ್ದಕ್ಕೆ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಹಾಗಾದರೆ ಈಶ್ವರಪ್ಪ ಅವರ ಮೇಲೆ ಏಕೆ ಮೊಕದ್ದಮೆ ದಾಖಲಿಸಿಲ್ಲ? ಈಶ್ವರಪ್ಪ ಅವರಿಗೆ ಒಂದು, ರೈತರಿಗೆ ಒಂದು ಕಾನೂನಿದೆಯಾ? ಈ ಬಿಜೆಪಿಯವರು ಯಾವಾಗಲು ಸಂವಿಧಾನ, ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ ಬದಲಾವಣೆ ಆಗಬೇಕು ಎನ್ನುವವರು. ಬಿಜೆಪಿ, ಆರ್.ಎಸ್.ಎಸ್ ನವರು ಒಂದು ದಿನವೂ ಇವುಗಳಿಗೆ ಗೌರವ ಕೊಟ್ಟವರಲ್ಲ. 2002, ಜನವರಿ 26 ರವರೆಗೆ ನಾಗಪುರದ ಆರ್.ಎಸ್.ಎಸ್ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ವಾಜಪೇಯಿ ಅವರು ಒತ್ತಾಯ ಮಾಡಿದ್ದಕ್ಕೆ ಹಾರಿಸಿರಬಹುದೇನೋ? ಇಂಥವರು ದೇಶ ಭಕ್ತಿ ಬಗ್ಗೆ ಪಾಠ ಮಾಡುತ್ತಾರೆ. ಸಂವಿಧಾನ ಹೋಗಿ ಮನುಸ್ಮೃತಿ ಬರಬೇಕು ಎಂಬುದು ಬಿಜೆಪಿಯವರ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದರು.

ಈಶ್ವರಪ್ಪ ಅವರಿಂದ ಆರ್.ಎಸ್.ಎಸ್ ನವರೇ ಈ ರೀತಿ ದೇಶದ್ರೋಹದ ಹೇಳಿಕೆ ಹೇಳಿಸಿರಬಹುದು, ಒಂದು ವೇಳೆ ಸಂವಿಧಾನದ ಬದಲು ಮನುಸ್ಮೃತಿ ಬಂದರೆ ಈಶ್ವರಪ್ಪ ಮಂತ್ರಿಯಾಗಲು ಆಗುತ್ತಾ? ಬಿಡ್ತಾರ? ಕುರಿ ಕಾಯ್ಕೊಂಡೋ, ಕಸ ಹೊಡ್ಕೊಂಡೋ ಇರಬೇಕಾಗುತ್ತೆ. ಈಶ್ವರಪ್ಪ ಗೊತ್ತಿಲ್ಲದೆ ಮಾತಾಡ್ತಾರೆ, ಪಾಪ ಇವರು ಆರ್.ಎಸ್.ಎಸ್ ನ ಜೀತದಾಳಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

1916 ರಿಂದ ರಾಷ್ಟ್ರ ಧ್ವಜ ಇರಬೇಕು ಎಂಬ ಚರ್ಚೆ ಆರಂಭವಾಗಿತ್ತು. ಒಮ್ಮೆ ನಾನು ನ್ಯೂಯಾರ್ಕ್ ನಲ್ಲಿ ಇದ್ದಾಗ ಅಲ್ಲಿ 44 ದೇಶಗಳ ರಾಷ್ಟ್ರ ಧ್ವಜ ಇತ್ತು, ನಮ್ಮ ದೇಶದ ಧ್ವಜ ಇರಲಿಲ್ಲ, ಅದನ್ನು ನೋಡಿ ನನಗೆ ನೋವಾಯಿತು, ಆ ಸಭೆಯಲ್ಲಿ ಮಾತನಾಡುವಾಗ ಬಹಳ ಅತ್ತುಬಿಟ್ಟೆ ಎಂದು ಸರೋಜಿನಿ ನಾಯ್ಡು ಅವರು ಸಂವಿಧಾನ ಸಭೆಯಲ್ಲಿ ಹೇಳಿದ್ದರು. 1947 ಜುಲೈ 22 ನೇ ತಾರೀಖು ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ನೆಹರು, ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್, ಸರೋಜಿನಿ ನಾಯ್ಡು ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅವರೆಲ್ಲ ದೇಶಪ್ರೇಮಿಗಳು. ಅವರ ಭಾಷಣಗಳು ಅದ್ಭುತವಾಗಿವೆ. ಎಲ್ಲರೂ ಒಮ್ಮೆ ಕೇಳಬೇಕು. 1931 ರಲ್ಲಿ ಕಾಂಗ್ರೆಸ್ ಪಕ್ಷ ತ್ರಿವರ್ಣ ಧ್ವಜದ ಮಧ್ಯೆ ಚರಕ ಇರುವ ಧ್ವಜವನ್ನು ಅಳವಡಿಸಿಕೊಂಡಿತ್ತು. ಕೇಸರಿ ತ್ಯಾಗದ ಸಂಕೇತ, ಬಿಜೆಪಿಯವರು ಕೇಸರಿ ಅಂದ ಕೂಡಲೆ ನಮ್ಮದು ಎನ್ನುತ್ತಾರೆ. ಬಿಜೆಪಿಯವರು ಎಲ್ಲಿ ತ್ಯಾಗ ಮಾಡಿದ್ದಾರೆ? ಅಶೋಕ ಚಕ್ರವರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವ್ಯಕ್ತಿ, ವಿಶ್ವ ಶಾಂತಿ, ಬ್ರಾತ್ರುತ್ವವನ್ನು ಸಾರಿದವರು. ಅಶೋಕ ಚಕ್ರ ಅಭಿವೃದ್ಧಿಯ ಸಂಕೇತ. ರಾಷ್ಟ್ರ ಧ್ವಜ ನೋಡಿದರೆ ಸ್ಪೂರ್ತಿ ಬರುತ್ತದೆ, ರಾಷ್ಟ್ರದ ಅಥವಾ ರಾಜ್ಯ ನಾಯಕರು ಸತ್ತಾಗ ರಾಷ್ಟ್ರ ಧ್ವಜ ಹೊದಿಸಿ ಗೌರವ ಸೂಚಿಸುತ್ತಾರೆ. ರಾಷ್ಟ್ರ ಧ್ವಜಕ್ಕೆ ಅಷ್ಟು ಮೇರು ಸ್ಥಾನ ಇದೆ ಎಂದರು.

ಸಂವಿಧಾನದ ರಕ್ಷಣೆ ಮಾಡಬೇಕಿರುವುದು ರಾಜ್ಯಪಾಲರ ಜವಾಬ್ದಾರಿ, ಅವರು ಮುಖ್ಯಮಂತ್ರಿಗಳಿಗೆ ಹೇಳಿ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ನಿರ್ದೇಶನ ನೀಡಬೇಕಿತ್ತು. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿ ದೇಶದ್ರೋಹ ಎಸಗಿರುವ ಈಶ್ವರಪ್ಪ ಸಚಿವರಾಗಿ ಮುಂದುವರೆಯಲು ಅನರ್ಹರು, ಅವರು ಒಂದು ವೇಳೆ ಕ್ಷಮೆ ಕೇಳಿದರೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp
Exit mobile version