ವಯನಾಡ್: ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿ, 2ನೇ ಹಂತದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇದೇವೇಳೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ಬಿಜೆಪಿ ಆಡಳಿತದಲ್ಲಿ ಸಾಂವಿಧಾನಿಕ ಮೌಲ್ಯಗಳು ನಿರಂತರವಾಗಿ ಬುಡಮೇಲಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಮೀನಂಗಡಿಯಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಣಿಪುರದಲ್ಲಿನ ಹಿಂಸಾಚಾರವನ್ನು ಪ್ರಸ್ತಾಪಿಸಿದ ಅವರು, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಯೋಜಿತ ದಾಳಿ ನಡೆಯುತ್ತಿವೆ ಎಂದು ದೂರಿದ್ದಾರೆ.
‘ಕೇಂದ್ರದ ಬಿಜೆಪಿ ಸರ್ಕಾರವು ಭಯ, ಸಿಟ್ಟು ಮತ್ತು ದ್ವೇಷವನ್ನು ಸಮುದಾಯಗಳಲ್ಲಿ ಹರಡುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ನೋಡಿದ್ದೀರಿ. ಮಣಿಪುರದಲ್ಲಿ ನಡೆದ ಹಿಂಸಾಚಾರಗಳನ್ನು ಕಂಡಿದ್ದೀರಿ. ಜನರಲ್ಲಿ ಆಗಿಂದ್ದಾಗ್ಗೆ ಸಿಟ್ಟು,ದ್ವೇಷದ ಹರಡುವಿಕೆ ಮತ್ತು ಭಯವು ಯೋಜಿತ ರೀತಿಯಲ್ಲಿ ಉಂಟಾಗುತ್ತಿರುವುದನ್ನು ಪದೇ ಪದೇ ನೋಡುತ್ತಿದ್ದೀರಿ’ ಎಂದು ಹೇಳಿದರು.