Home ಜಾಲತಾಣದಿಂದ ಡಿ ಗ್ರೂಪ್ ನೌಕರರೆಂದು ಪರಿಗಣಿಸಿ: ಸ್ವಾತಂತ್ರ್ಯ ಉದ್ಯಾನವನದಲ್ಲಿ ಗ್ರಾಮ ಸಹಾಯಕರ ಪ್ರತಿಭಟನೆ  

ಡಿ ಗ್ರೂಪ್ ನೌಕರರೆಂದು ಪರಿಗಣಿಸಿ: ಸ್ವಾತಂತ್ರ್ಯ ಉದ್ಯಾನವನದಲ್ಲಿ ಗ್ರಾಮ ಸಹಾಯಕರ ಪ್ರತಿಭಟನೆ  

ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ 44 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರನ್ನು ಡಿಗ್ರೂಪ್ ನೌಕರರೆಂದು ಪರಿಗಣಿಸಬೇಕೆಂದು ಸಾವಿರಾರು ಗ್ರಾಮ ಸಹಾಯಕರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯರಾಮ್, ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ ಇಡಿಗಂಟು ನಿಧಿ ಹಾಗೂ ಮಹಿಳಾ ಗ್ರಾಮ ಸಹಾಯಕಿಯರಿಗೆ ಮಾತೃ ರಜೆ ನೀಡುವ ಬಗ್ಗೆ ಕಂದಾಯ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಉಳಿದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗ್ಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಧಾನ ಕಾರ್ಯದರ್ಶಿಗಳ ಭರವಸೆಗೆ ಜಗ್ಗದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ದೇವರಾಜ್, 1977- 78ರಲ್ಲಿ ಸೃಷ್ಟಿಸಲಾದ ಹುದ್ದೆಯಲ್ಲಿ ಅನೇಕ ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸಾವಿರಾರು ನೌಕರರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. 2007ರಲ್ಲಿ ಈ ಹುದ್ದೆಯನ್ನು ಖಾಯಂಗೊಳಿಸಲಾಗಿತ್ತು. ಆದರೆ ಇದುವರೆಗೂ ಹುದ್ದೆಗೆ ತಕ್ಕಂತೆ ಮೂಲ ವೇತನ ನಿಗದಿಯಾಗಿರುವುದಿಲ್ಲ. ವೇತನ ಪರಿಷ್ಕರಣೆ ಮಾಡಿಲ್ಲ. ಅನೇಕ ಬಾರಿ ಸಂಘವು ಗ್ರಾಮ ಸಹಾಯಕರನ್ನು ಡಿ.ದರ್ಜೆ ನೌಕರರೆಂದು ಪರಿಗಣಿಸಿ ಸೇವಾನಿಯಮಾವಳಿ ರಚಿಸಬೇಕೆಂದು ಮನವರಿಕೆ ಮಾಡಿದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಹೇಳಿದರು.

ಗ್ರಾಮ ಸಹಾಯಕರು ಮಾಸಿಕ 13 ಸಾವಿರ ರೂಪಾಯಿ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. 2013ರ  ಚಳಿಗಾಲದ ಅದಿವೇಶನ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮ ಸಹಾಯಕರನ್ನು ಡಿ.ದರ್ಜೆ ನೌಕರರೆಂದು ಪರಿಗಣಿಸಲು ಭರವಸೆ ನೀಡಿದ್ದರಿಂದ ಚಳವಳಿ ವಾಪಸ್ ಪಡೆಯಲಾಗಿತ್ತು. 2014 ಜನವರಿ ಮೂರರಂದು ಕಾನೂನು ಚೌಕಟ್ಟಿನಲ್ಲಿ ಭರವಸೆ ಈಡೇರಿಸುವುದಾಗಿ ಇದುವರೆಗೂ ಕಾರ್ಯಗತವಾಗಿಲ್ಲ ಎಂದರು.

ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ವರದಿ ಹಾಗೂ ಅಡ್ವೋಕೇಟ್ ಜನರಲ್ ಮಧುಸೂದನ್ ಆರ್.ನಾಯಕ್ ನೀಡಿರುವ ವರದಿಯಲ್ಲಿ ಉಮಾದೇವಿ ಪ್ರಕರಣ ಅಡ್ಡಬರುವುದಿಲ್ಲವೆಂದು ಹಾಗೂ ಗ್ರಾಮ ಸಹಾಯಕರ ಹುದ್ದೆಯನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಲು ಯಾವುದೇ ಕಾನೂನು ತೊಡಕು ಇರುವುದಿಲ್ಲ ವರದಿ ತಿಳಿಸಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾದಿಗ ಧಂಡೋರ ಶ್ರೀರಾಮ್, ತುಮಕೂರು ಜಿಲ್ಲಾಘಟಕ ಅಧ್ಯಕ್ಷ ಕೆ.ಎನ್.ಲಕ್ಷ್ಮೀ ನಾರಾಯಣ, ಉಪಾಧ್ಯಕ್ಷ ಬಿ.ಜಿ.ರಘ, ಪ್ರಧಾನ ಕಾರ್ಯದರ್ಶಿ ಬೀಮಯ್ಯ ಮತ್ತಿತರರು ಹಾಜರಿದ್ದರು.

Join Whatsapp
Exit mobile version