ಭೋಪಾಲ್: ಕಾಂಗ್ರೆಸ್ಸಿಗರೇ ಬಿಜೆಪಿ ಸೇರಿ ಇಲ್ಲದಿದ್ದರೆ 2023ರ ಬಳಿಕ ಬುಲ್ಡೋಜರ್ ಸಿದ್ಧವಿದೆ ಎಂದು ಪಂಚಾಯತ್ ರಾಜ್ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಬೆದರಿಸಿದ್ದಾರೆ.
ಅವರು ರಾಘೋಘಡದಲ್ಲಿ ಮಾತನಾಡುತ್ತ ಈ ರೀತಿ ಬೆದರಿಕೆಯ ಧ್ವನಿಯಲ್ಲಿ ಮಾತನಾಡಿದ್ದಾರೆ.
ನಾವು ಬ್ರಿಟಿಷರ ವಿರುದ್ಧ ಹೋರಾಡಿದವರು, ನಿಮ್ಮ ಬುಲ್ಡೋಜರ್ ಅದಕ್ಕಿಂತ ದೊಡ್ಡದಲ್ಲ” ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕೆ. ಕೆ. ಮಿಶ್ರಾ ಮಧ್ಯಪ್ರದೇಶದ ಮಂತ್ರಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸೇರಿ ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಮನೆಯನ್ನು ಧ್ವಂಸಗೊಳಿಸಲು ಬುಲ್ಡೋಜರ್ ಸಿದ್ಧವಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ಈ ಮಂತ್ರಿ ಹೀಗೆ ಬೆದರಿಸುವ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ವಿವಾದವನ್ನು ಹುಟ್ಟು ಹಾಕಿದೆ.
“ಆಳುವ ನಮ್ಮ ಬಿಜೆಪಿ ಪಕ್ಷಕ್ಕೆ ಆದಷ್ಟು ಬೇಗ ಸೇರಿಕೊಳ್ಳಿ. 2023ರಲ್ಲೂ ಮಧ್ಯ ಪ್ರದೇಶದಲ್ಲಿ ಬಿಜೆಪಿಯು ಸರಕಾರ ರಚಿಸುತ್ತದೆ. ಮಾಮಾರ ಬುಲ್ಡೋಜರ್ ಸಿದ್ಧವಾಗಿದೆ ಎಂದು ಮಂತ್ರಿ ಮಹೇಂದ್ರ ಸಿಂಗ್ ಸಿಸೋಡಿಯಾರು ರಾಘೋಘಡ ನಗರ ಮುನಿಸಿಪಲ್ ಚುನಾವಣೆ ವೇಳೆ ಸಾರ್ವಜನಿಕ ಭಾಷಣ ಮಾಡುತ್ತ ಹೇಳಿದ್ದಾರೆ.
ಜನವರಿ 20ರ ಶುಕ್ರವಾರ ಅಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿದೆ.
ಕೆಲವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿನಂತೆ ಮಧ್ಯ ಪ್ರದೇಶದಲ್ಲೂ ಬುಲ್ಡೋಜರ್ ನ್ಯಾಯ ಜಾರಿಯಲ್ಲಿದೆ. ನಾನಾ ಆರೋಪ ಹೊತ್ತವರ ಮನೆಗಳನ್ನು ಅಕ್ರಮ ನಿರ್ಮಾಣ, ಒತ್ತವರಿ ಎಂದು ಬುಲ್ಡೋಜರ್ ಹಾಯಿಸಿ ಬೀಳಿಸುವ ಕೆಲಸವನ್ನು ಶಿವರಾಜ್ ಸಿಂಗ್ ಚೌಹಾಣ್ ಸರಕಾರವು ಮಾಡುತ್ತಿದೆ.
ಈ ಕ್ರಮಗಳಿಗಾಗಿ ಚೌಹಾನ್ ಹೊಗಳಲ್ಪಡುತ್ತಿದ್ದಾರೆ. ಕ್ರಿಮಿನಲ್’ಗಳತ್ತ ಶೂನ್ಯ ಸಹನೆಗಾಗಿ ಅವರಿಗೆ ಮಾಮಾ ಎಂಬ ಬಿರುದೂ ಸಂದಿದೆ! ಈ ಮಂತ್ರಿಯ ಧಮಕಿಗೆ ಕಾಂಗ್ರೆಸ್ ನಾಯಕ ಕೆ. ಕೆ. ಮಿಶ್ರಾ ಟ್ವಿಟರ್ ನಲ್ಲಿ ಜಾಡಿಸಿದ್ಧಾರೆ. “ನಾವು ಬ್ರಿಟಿಷರ ವಿರುದ್ಧ ಹೋರಾಡಿದವರು, ನಿಮ್ಮ ಬುಲ್ಡೋಜರ್ ಅದಕ್ಕಿಂತ ದೊಡ್ಡದಲ್ಲ” ಎಂದು ಹೇಳಿದ್ದಾರೆ.
ಈ ವರ್ಷಾಂತ್ಯದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಸರಕಾರ ರಚಿಸುವ ಭರವಸೆಯನ್ನೂ ಕಾಂಗ್ರೆಸ್ ಪ್ರಕಟಿಸಿದೆ.
ಬಿಜೆಪಿಯು 50ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ತಾನು ಮುಖಕ್ಕೆ ಮಸಿ ಹಾಕಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕ ಫೂಲ್ ಸಿಂಗ್ ಭರೈಯಾ ಹೇಳಿದ್ದಾರೆ.
“ಈ ವರ್ಷ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯು 50ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ರಾಜಭವನದೆದುರು ನನ್ನ ಮುಖವನ್ನು ನಾನೇ ಕಪ್ಪಗಾಗಿಸಿಕೊಳ್ಳುತ್ತೇನೆ. ಇದು ನನ್ನ ಪ್ರತಿಜ್ಞೆ. ನಾನು ಇದಕ್ಕೆ ಎಲ್ಲ ರೀತಿಯಿಂದಲೂ ತಯಾರಾಗಿದ್ದೇನೆ” ಎಂದು ಫೂಲ್ ಸಿಂಗ್ ಭರೈಯಾ ತಿಳಿಸಿದ್ದಾರೆ.