Home ಟಾಪ್ ಸುದ್ದಿಗಳು ಜನಾಶೀರ್ವಾದ ಯಾತ್ರೆಯಲ್ಲಿ ಗುಂಡು ಹಾರಾಟ: ಸಂಪುಟದಿಂದ ಖೂಬಾ ಕೈಬಿಡಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಜನಾಶೀರ್ವಾದ ಯಾತ್ರೆಯಲ್ಲಿ ಗುಂಡು ಹಾರಾಟ: ಸಂಪುಟದಿಂದ ಖೂಬಾ ಕೈಬಿಡಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಜನಾಶೀರ್ವಾದ ಯಾತ್ರೆಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ರನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯಕರ್ತರು ಬೆಂಗಳೂರಿನಲ್ಲಿಂದು ಗುರುವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಭಗವಂತ ಖೂಬಾರ ವರ್ತನೆಯನ್ನು ಖಂಡಿಸಿ ಅವರ ಪ್ರತಿಕೃತಿ ದಹಿಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೊರೋನಾ ನಿಯಮ ಪಾಲನೆಯನ್ನು ಗಾಳಿಗೆ ತೂರುತ್ತಿದ್ದಾರೆ . ಪೊಲೀಸ್ ಇಲಾಖೆಯಂತೂ ಕಣ್ಣುಮುಚ್ಚಿ ಕೂತಿದೆ , ರಾಜ್ಯ ಸರ್ಕಾರದ ಪರವಾಗಿ ಪೋಲಿಸರು ವರ್ತಿಸುತ್ತಿದ್ದಾರೆ ನೀತಿನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ವಿರೋಧಪಕ್ಷಗಳನ್ನು ಗುರಿಯಾಗಿಸಿ ಪೋಲಿಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಸ್ ಮನೋಹರ್ ಆರೋಪಿಸಿದರು.

ಕೂಡಲೇ ಪೊಲೀಸ್ ಇಲಾಖೆ ಪಕ್ಷಪಾತ ಧೋರಣೆಯನ್ನು ಕೈ ಬಿಟ್ಟು ಯಾರೇ ನಿಯಮ ಉಲ್ಲಂಘಿಸಿದ್ದರೂ ಹಾಗೂ ಇಂತಹ ಭಯದ ವಾತಾವರಣ ಸೃಷ್ಟಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಗಾಳಿಯಲ್ಲಿ ಗುಂಡು ಹಾರಿಸಲು ಉತ್ತೇಜನ ನೀಡಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ನನ್ನು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ರನ್ನು ಕೂಡಲೇ ಬಂಧಿಸಬೇಕು ಹಾಗೂ ಕ್ರಮಕೈಗೊಳ್ಳದೇ ಹೋದರೆ ರಾಜ್ಯದ ಪೊಲೀಸರಿಗೆ ಇದು ಕಪ್ಪುಚುಕ್ಕೆ ಎಂಬುದನ್ನು ಪೊಲೀಸ್ ಇಲಾಖೆ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.


ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಮನೋಹರ್, ಎಂ ಎ ಸಲೀಂ, ಮಾಧ್ಯಮ ಕಾರ್ಯದರ್ಶಿ ಜಿ ಜನಾರ್ಧನ್, ಆನಂದ್, ಜಯಸಿಂಹ, ಮಹೇಶ್, ಪುಟ್ಟರಾಜು, ಚಂದ್ರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Join Whatsapp
Exit mobile version