Home ಟಾಪ್ ಸುದ್ದಿಗಳು ‘ಆಪರೇಷನ್​ ಸಿಂಧೂರ’ ​​ಶ್ಲಾಘಿಸಿದ ಕಾಂಗ್ರೆಸ್​, ಪ್ರತಿಪಕ್ಷಗಳು

‘ಆಪರೇಷನ್​ ಸಿಂಧೂರ’ ​​ಶ್ಲಾಘಿಸಿದ ಕಾಂಗ್ರೆಸ್​, ಪ್ರತಿಪಕ್ಷಗಳು

0

►’ಇದು ಏಕತೆ ಮತ್ತು ಒಗ್ಗಟ್ಟಿನ ಸಮಯ’ವೆಂದ ನಾಯಕರು

ನವದೆಹಲಿ: ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ಭಾರತೀಯ ಭದ್ರತಾ ಪಡೆಗಳನ್ನು ಕಾಂಗ್ರೆಸ್ ಶ್ಲಾಘಿಸಿದ್ದು, ಪಕ್ಷಕ್ಕೆ ರಾಷ್ಟ್ರೀಯ ಭದ್ರತೆ ಮಹತ್ವ ಎಂದು ಹೇಳಿದೆ.

“ಪಾಕಿಸ್ತಾನ ಮತ್ತು ಪಿಒಕೆಯ ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಭಾರತವು ದೃಢವಾದ ರಾಷ್ಟ್ರೀಯ ನೀತಿಯನ್ನು ಹೊಂದಿದೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಸೇನೆಯ ದೃಢ ನಿಶ್ಚಯ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ. ಪಹಲ್ಗಾಮ್​ ಭಯೋತ್ಪಾದಕ ದಾಳಿಯ ದಿನದಿಂದ, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಯಾವುದೇ ನಿರ್ಣಾಯಕ ಕ್ರಮ ಕೈಗೊಳ್ಳಲು ನಮ್ಮ ಪಕ್ಷ ಸಶಸ್ತ್ರ ಪಡೆಗಳು ಮತ್ತು ಸರ್ಕಾರದೊಂದಿಗೆ ಸ್ಪಷ್ಟವಾಗಿ ನಿಂತಿದೆ” ಎಂದು ಅವರು ಎಕ್ಸ್​ ಪೋಸ್ಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಹಾಗೆಯೇ, “ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟು ಈ ಸಮಯಕ್ಕೆ ಅಗತ್ಯವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ. ನಮ್ಮ ನಾಯಕರು ಹಿಂದೆಯೂ ಮಾರ್ಗವನ್ನು ತೋರಿಸಿದ್ದಾರೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ನಮಗೆ ಅತ್ಯುನ್ನತವಾಗಿದೆ” ಎಂದು ಖರ್ಗೆ “#ಆಪರೇಷನ್ ಸಿಂಧೂರ” ಎಂಬ ಹ್ಯಾಶ್‌ಟ್ಯಾಗ್ ಬಳಸಿ ಹೇಳಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯಿದೆ. ಜೈ ಹಿಂದ್!” ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಯೋತ್ಪಾದನೆಯ ಎಲ್ಲಾ ಮೂಲಗಳನ್ನು ನಿರ್ಮೂಲನೆ ಮಾಡುವ ಭಾರತದ ಬದ್ಧತೆಯು ರಾಜಿಯಾಗದಂತಿರಬೇಕು ಮತ್ತು ಯಾವಾಗಲೂ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಆಧಾರವಾಗಿರಬೇಕು. ಇದು ಏಕತೆ ಮತ್ತು ಒಗ್ಗಟ್ಟಿನ ಸಮಯ. ಎಪ್ರಿಲ್​ 22ರ ರಾತ್ರಿಯಿಂದಲೇ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ರಾಷ್ಟ್ರದ ಪ್ರತಿಕ್ರಿಯೆಯಲ್ಲಿ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು INC ಸ್ಪಷ್ಟವಾಗಿ ಹೇಳುತ್ತಿದೆ. ಕಾಂಗ್ರೆಸ್​ ಪಕ್ಷ ನಮ್ಮ ಸಶಸ್ತ್ರ ಪಡೆಗಳೊಂದಿಗೆ ದೃಢವಾಗಿ ನಿಂತಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

“ಪ್ರತಿಯೊಬ್ಬ ಭಾರತೀಯನು ಭಾರತದ ಸಶಸ್ತ್ರ ಪಡೆಗಳ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಮಧ್ಯರಾತ್ರಿ 12.30 ರ ಸುಮಾರಿಗೆ ಒಂಬತ್ತು ಭಯೋತ್ಪಾದಕ ಸ್ಥಳಗಳ ಮೇಲೆ ಯಶಸ್ವಿ ವಾಯುದಾಳಿಗಳನ್ನು ನಡೆಸಿದೆ. ಈ ಕ್ರಮವು ಯಾವುದೇ ಪಾಕಿಸ್ತಾನಿ ನಾಗರಿಕ ಅಥವಾ ಪಾಕಿಸ್ತಾನಿ ಸೈನ್ಯಕ್ಕೆ ಯಾವುದೇ ಹಾನಿಯನ್ನುಂಟು ಮಾಡಲಿಲ್ಲ. ಆದರೆ ಉಗ್ರರ ಒಂಬತ್ತು ಗುರಿಗಳ ಮೇಲೆ ನಿಖರವಾದ ಮತ್ತು ಯೋಜಿತ ದಾಳಿಯನ್ನು ನಡೆಸಿದೆ. ಇಡೀ ರಾಷ್ಟ್ರವು ಭಾರತೀಯ ಮಿಲಿಟರಿ ಸೇವೆ ಅಥವಾ ಶೌರ್ಯದ ಬಗ್ಗೆ ಹೆಮ್ಮೆಪಡುತ್ತದೆ. ಭಾರತದ ಸಾರ್ವಭೌಮತ್ವ ಮತ್ತು ತನ್ನ ನಾಗರಿಕರ ಸುರಕ್ಷತೆಯನ್ನು ಕಾಪಾಡಿಕೊಂಡ ಮತ್ತು ಪಹಲ್ಗಾಮ್ ದಾಳಿಗೆ ಯೋಗ್ಯ ಪ್ರತಿಕ್ರಿಯೆ ನೀಡಿದ ಎಲ್ಲಾ ಭಾರತೀಯ ಸೈನಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜೈ ಹಿಂದ್!” ಎಂದು ಎಕ್ಸ್​ನಲ್ಲಿ ಎನ್​ಸಿಪಿ ನಾಯಕ ಶರದ್​ ಪವಾರ್ ಪೋಸ್ಟ್​ ಹಾಕಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ಪ್ರತಿಕ್ರಿಯೆ: “ನಮಗೆ ಭಾರತೀಯ ಸೇನೆ ಮತ್ತು ನಮ್ಮ ವೀರ ಸೈನಿಕರ ಬಗ್ಗೆ ಹೆಮ್ಮೆ ಇದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ 140 ಕೋಟಿ ಭಾರತೀಯರು ಭಾರತೀಯ ಸೇನೆಯೊಂದಿಗೆ ನಿಂತಿದ್ದಾರೆ. ಭಾರತೀಯ ಸೇನೆಯ ಧೈರ್ಯ ಪ್ರತಿಯೊಬ್ಬ ದೇಶವಾಸಿಯ ನಂಬಿಕೆಯಾಗಿದೆ. ನಾವು ಎಲ್ಲರೂ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾದ್ದೇವೆ. ಜೈ ಹಿಂದ್​, ಜೈ ಭಾರತ್​” ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version