ಬೆಂಗಳೂರು: ರಾಜ್ಯ ಗೃಹ ಇಲಾಖೆ ಕಾನೂನು ಜಾರಿ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ನಿಯೋಗವು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಶಿವಮೊಗ್ಗ ಗಲಭೆ, ಹಿಜಾಬ್ ವಿವಾದ, ಆಳಂದ ಗಲಭೆ, ಕೋಲಾರ ಹಾಗೂ ಮಂಗಳೂರು ಕಡೆಗಳಲ್ಲಿ ಚರ್ಚ್‍ಗಳಿಗೆ ದಾಳಿ, ದಲಿತಪರ ಹೋರಾಟಗಾರ ಚೇತನ್ ಅಹಿಂಸಾರವರ ಬಂಧನ ಸೇರಿದಂತೆ ಹಲವಾರು ವಿಚಾರಗಳಲ್ಲಿ ರಾಜ್ಯ ಸರಕಾರದ ಗೃಹ ಇಲಾಖೆ ಅನುಸರಿಸುತ್ತಿರುವ ತಾರತಮ್ಯ ನೀತಿಯ ಬಗ್ಗೆ ಗಮನ ಸೆಳೆದರು.
ಬಿಜೆಪಿಯ ಕಾರ್ಯಕರ್ತರಿಗೊಂದು ನ್ಯಾಯ, ಜನ ಸಾಮಾನ್ಯರಿಗೊಂದು ನ್ಯಾಯ, ಶಿವಮೊಗ್ಗ ಗಲಭೆಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸದ ಪೊಲೀಸ್ ಇಲಾಖೆ, ಆಳಂದ ಗಲಭೆಯಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಿಸಿ ಬಂಧಿಸಲಾಗಿದೆ. ಚರ್ಚ್ ದಾಳಿ ನಡೆಸಿದವರ ಬಗ್ಗೆ ಕ್ರಮ ಕೈಗೊಳ್ಳದೇ, ಅಲ್ಪಸಂಖ್ಯಾತರ ಮೇಲೆ ದಾಖಲಿಸುವ ಪ್ರಕರಣಕ್ಕೂ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗುವ ಪ್ರಕರಣಕ್ಕೂ ಸೆಕ್ಷನ್ ಹಾಕುವಲ್ಲಿ ತಾರತಮ್ಯ ನಡೆಸಲಾಗುತ್ತಿದೆ ಎಂದು ನಿಯೋಗ ದೂರಿತು.
ರಾಜ್ಯ ಸರಕಾರ ಕಾನೂನು ಪಾಲನೆಯಲ್ಲಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ. ಕಾನೂನಿನ ಪಾಲಕರಾದ ಪೊಲೀಸ್ ಇಲಾಖೆ ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯದೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಪ್ರಕಾರ ನಡೆದುಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಮನವಿಯಲ್ಲಿ ತಿಳಿಸಿದ ಪ್ರತಿಯೊಂದು ವಿಚಾರದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಜನ ಸಾಮಾನ್ಯರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾಗಿ ನಿಯೋಗವು ತಿಳಿಸಿದೆ.
ನಿಯೋಗದಲ್ಲಿ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸಕರಾದ ಎನ್.ಎ.ಹಾರೀಸ್, ಕನೀಝ್ ಫಾತಿಮಾ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್, ಕಾರ್ಯದರ್ಶಿ ಇರ್ಫಾನ್, ಎಐಸಿಸಿ ಕಾರ್ಯದರ್ಶಿ ಐವಾನ್ ಡಿ’ಸೋಜಾ, ಮುಖಂಡರಾದ ಜಿ.ಎ.ಬಾವಾ, ಹನುಮಂತಯ್ಯ, ನಿಝಾಮ್ ಫೌಜ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.