Home ರಾಜ್ಯ ಕಾಂಗ್ರೆಸ್ ಐಸಿಯು ಒಳಗಿದೆ, ಚುನಾವಣೆಗೆ ಮೊದಲು ಅದು ಸತ್ತು ಹೋಗಲಿದೆ : ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್ ಐಸಿಯು ಒಳಗಿದೆ, ಚುನಾವಣೆಗೆ ಮೊದಲು ಅದು ಸತ್ತು ಹೋಗಲಿದೆ : ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವ ಮತ್ತು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮುಂದಿನ ಚುನಾವಣೆ ಎದುರಿಸಲಿದ್ದು, 150 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅತಿ ಹೆಚ್ಚು ಶಾಸಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ಲಿಸ್ಟ್ ಮಾಡಲು ಪುರುಸೊತ್ತಿಲ್ಲದಷ್ಟು ಮುಖಂಡರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರುವುದು ಖಚಿತ ಎಂದು ತಿಳಿಸಿದರು.

ಕಾಂಗ್ರೆಸ್ ಗೆ ರಾಜ್ಯ ಪದಾಧಿಕಾರಿಗಳ ಘೋಷಣೆಗೆ ಎರಡು ವರ್ಷ ಬೇಕಾಯಿತು. ಅದು ರಾಜ್ಯದಲ್ಲಿ ಸತ್ತು ಹೋಗಿದೆ. ಒಂದು ಪಕ್ಷ ನಡೆಸಲು ಅಸಾಧ್ಯವಾದ ಮುಖಂಡರಿಗೆ ಮುಂದಿನ ದಿನಗಳಲ್ಲಿ ಸರಕಾರ ನಡೆಸಲು ಸಾಧ್ಯವೇ ಎಂದು ಕೇಳಿದರು. ಕಾಂಗ್ರೆಸ್ ಐಸಿಯು ಒಳಗಿದೆ. ಚುನಾವಣೆಗೆ ಮೊದಲು ಅದು ಸತ್ತು ಹೋಗಲಿದೆ. ಕಾಂಗ್ರೆಸ್ ಪಕ್ಷದ ಒಳಜಗಳದಿಂದ ಬೂತ್ ಗೆ ಒಬ್ಬ ಪ್ರಧಾನ ಕಾರ್ಯದರ್ಶಿ ನೇಮಕ ಆದರೂ ಆಚ್ಚರಿಯಿಲ್ಲ ಎಂದು ತಿಳಿಸಿದರು. ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡದ ಕಾಂಗ್ರೆಸ್ ಸೋಲುತ್ತಿದೆ ಎಂದು ವಿಶ್ಲೇಷಿಸಿದರು.

ಪಿಎಸ್ಐ ನೇಮಕ ಹಗರಣದ ತನಿಖೆಗೆ ತಕ್ಷಣ ಆದೇಶ ನೀಡಿದ ಬೊಮ್ಮಾಯಿ ಸರಕಾರ ಅಭಿನಂದನಾರ್ಹ ಎಂದರು. ಪಾರದರ್ಶಕ ತನಿಖೆ ನಡೆದಿದೆ. ಹಿಂದೆ ಸಿದ್ರಾಮಣ್ಣ ಡ್ರಗ್ಸ್ ಹಣದಲ್ಲಿ ಸರಕಾರ ನಡೆಸಿದ್ದರು. ಆದರೆ, ಡ್ರಗ್ಸ್ ಮುಕ್ತವಾಗಿ ನಾವು ರಾಜ್ಯ ಮುನ್ನಡೆಸಿದ್ದೇವೆ ಎಂದು ತಿಳಿಸಿದರು.

ದೇಶದ ಬಗ್ಗೆ ಅಭಿಮಾನ ಮತ್ತು ಗೌರವ ಇಲ್ಲದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಬಾಂಬಿನ ಕಾರ್ಖಾನೆಗಳನ್ನು ಸೃಷ್ಟಿಸಿತು. ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಯಿತು. ಭಯೋತ್ಪಾದನೆಯ ಸೃಷ್ಟಿಗೆ ಕಾಂಗ್ರೆಸ್ ಕಾರಣವಾಯಿತು ಎಂದು ವಿವರಿಸಿದರು.

ನರೇಂದ್ರ ಮೋದಿ ಅವರ ಆಡಳಿತದಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ಆಗಿಲ್ಲ. ನಕ್ಸಲ್ ವಾದ ನಿಂತಿದೆ. ಜನರು ಮೋದಿಯವರ ಮತ್ತು ಬೊಮ್ಮಾಯಿಯವರ ಆಡಳಿತವನ್ನು ಗಮನಿಸುತ್ತಿದ್ದಾರೆ. ಜನರು ಬಿಜೆಪಿ ಯುಗವನ್ನು ಬಯಸುತ್ತಾರೆ ಎಂದರು.

Join Whatsapp
Exit mobile version