ಶಿವಮೊಗ್ಗ: ಜನರ ದುಡ್ಡಲ್ಲಿ ದೆಹಲಿಯಲ್ಲಿ ಲೋಕಸಭಾ ಚುನಾವಣೆಯ ಮೊದಲ ಪ್ರಚಾರವನ್ನು ಕಾಂಗ್ರೆಸ್ ಆರಂಭ ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ದುಡ್ಡಲ್ಲಿ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದು ತೋರಿಸಿದ್ದಾರೆ. ಏರ್ ಟಿಕೆಟ್, ಊಟ ತಿಂಡಿ, ರೂಮ್ ಬಾಡಿಗೆಗೆ ಜನರ ತೆರಿಗೆ ದುಡ್ಡು ಬಳಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ವಿನಯ್ ಕುಲಕರ್ಣಿ ವಾದ ಮಂಡಿಸಿದ್ದಾರೆ. ಇದರ ಪೀಠಿಕೆಯನ್ನು ಡಿ.ಕೆ ಸುರೇಶ್ ಹಾಕಿದ್ದರು. ಅಧಿಕಾರಕ್ಕಾಗಿ ದೇಶವನ್ನು ಹಿಂದೂಸ್ತಾನ ಹಾಗೂ ಪಾಕಿಸ್ತಾನ ಎಂದು ಒಡೆದಿದ್ದೀರಿ. ಈ ಬಗ್ಗೆ ನಾನು ಖರ್ಗೆ ಅವರನ್ನು ಪ್ರಶ್ನೆ ಮಾಡುತ್ತೇನೆ. ರಾಜ್ಯಸಭೆಯಲ್ಲಿ ಅಖಂಡ ಭಾರತವನ್ನು ಒಡೆಯಲು ಬಿಡಲ್ಲ ಎಂದು ನೀವು ಹೇಳಿದ್ದೀರಿ. ನಿಮ್ಮ ಮಾತಿಗೆ ಸ್ವಲ್ಪವೂ ಕಿಮ್ಮತ್ತಿಲ್ಲ. ನೀವು ಹೇಳಿದರೂ ನಿಮ್ಮ ಆ ರಾಷ್ಟ್ರ ದ್ರೋಹಿಗಳು ಮಾತನಾಡ್ತಾರೆ. ಡಿ.ಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿಯವರನ್ನು ಅಮಾನತು ಮಾಡಬೇಕು ಎಂದರು.