ಬೆಳಗಾವಿ: ರಾಜ್ಯಕ್ಕೆ ಸಮರ್ಪಕವಾದ ಅನುದಾನ ಬಿಡುಗಡೆಗೊಳಿಸುವಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ಖಂಡಿಸಿ, ಇಲ್ಲಿನ ಕಾಂಗ್ರೆಸ್ ಭವನಕ್ಕೆ ಬಿಜೆಪಿ ಕಾರ್ಯಕರ್ತರು ಬುಧವಾರ ಮುತ್ತಿಗೆ ಹಾಕಲು ಯತ್ನಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಕಾರರು, ಕಾಂಗ್ರೆಸ್ ಭವನದವರೆಗೆ ಮೆರವಣಿಗೆಯನ್ನು ನಡೆಸಿದರು. ಅವರನ್ನು ತಡೆಯಲು ಮುಂದಾದ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದ, ತಳ್ಳಾಟ ನಡೆಯಿತು. 40ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.