Home ಟಾಪ್ ಸುದ್ದಿಗಳು ಕಾಕಾಡ್ ಭೈರವ್ ಎಂಬ ಕುಲದೇವತೆಗಳಿಗೆ ವರ್ಷಗಳಿಂದ ಪೂಜೆ: ಸತ್ಯ ತಿಳಿದಾಗ ದಿಗ್ಭ್ರಮೆಗೊಳಗಾದ ಗ್ರಾಮಸ್ಥರು

ಕಾಕಾಡ್ ಭೈರವ್ ಎಂಬ ಕುಲದೇವತೆಗಳಿಗೆ ವರ್ಷಗಳಿಂದ ಪೂಜೆ: ಸತ್ಯ ತಿಳಿದಾಗ ದಿಗ್ಭ್ರಮೆಗೊಳಗಾದ ಗ್ರಾಮಸ್ಥರು

ಬೋಫಾಲ್: ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಪದಲ್ಯ ಎಂಬ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕೆಲವು ಕಲ್ಲಿನ ಗುಂಡುಗಳನ್ನು ಜನರು ಕಾಕಾಡ್ ಭೈರವ್ ಎಂಬ ಹೆಸರಿನ ಕುಲ ದೇವತೆ ಎಂದು ಪೂಜಿಸುತ್ತಾ ಬಂದಿದ್ದಾರೆ. ತಮ್ಮ ಕೃಷಿ ಭೂಮಿಯನ್ನು, ಜಾನುವಾರುಗಳನ್ನು ಈ ದೇವತೆಗಳು ಕಾಯುತ್ತಿವೆ ಎಂದು ನಂಬುತ್ತಾ ಬಂದಿದ್ದಾರೆ. ಆದರೆ ಆ ಕಲ್ಲುಗಳು ಅಸಲಿಯತ್ತು ತಿಳಿದಾಗ ಅವರು ದಿಗ್ಭ್ರಮೆಗೊಳಗಾಗಿದ್ದಾರೆ. ಅವರು ಪೂಜಿಸುತ್ತಾ ಬಂದಿರುವುದು ಕಲ್ಲುಗಳೇ ಅಲ್ಲ, ಡೈನೋಸರ್‌ನ ಮೊಟ್ಟೆಗಳ ಪಳೆಯುಳಿಕೆ ಅನ್ನುವ ವಿಚಾರ ಇದೀಗ ಬಹಿರಂಗಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಧಾರ್‌ ಜಿಲ್ಲೆಯ ಭಾಗ್‌ ಪ್ರದೇಶದಲ್ಲಿರುವ ಡೈನೋಸಾರ್‌ ಪಾರ್ಕ್‌ ನಲ್ಲಿಯೂ ಅಂಥದ್ದೇ ಕಲ್ಲುಗಳನ್ನು ಕಂಡ ಜನರು ಅಲ್ಲಿಯೂ ಪೂಜೆ ಸಲ್ಲಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಜನರು ಪೂಜಿಸುತ್ತಿದ್ದ ಕಲ್ಲುಗಳ ಆಕೃತಿಯನ್ನು ಪರಿಶೀಲಿಸಿದ್ದಾರೆ. ಆಗ ಅವುಗಳು ಡೈನೋಸಾರ್‌ ಮೊಟ್ಟೆಗಳ ಪಳೆಯುಳಿಕೆ ಎಂದು ತಿಳಿದುಬಂದಿದೆ. ಇವುಗಳನ್ನೇ ಜನರು ದೇವರೆಂದು ಪೂಜಿಸುತ್ತಿರುವುದು ಎಂದು ಅರಿವಾಗಿದೆ. ಆ ಬಳಿಕ ತಜ್ಞರು ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈಗಾಗಲೇ ಧಾರ್‌ ಜಿಲ್ಲೆಯಲ್ಲಿ 250ಕ್ಕೂ ಅಧಿಕ ಮೊಟ್ಟೆಗಳ ಪಳೆಯುಳಿಕೆ ಪತ್ತೆಯಾಗಿವೆ.

Join Whatsapp
Exit mobile version