ಬೆಂಗಳೂರು: ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುವ ಮೂಲಕ ಕರ್ನಾಟಕದ ತಾಲಿಬಾನಿಕರಣಕ್ಕೆ ಸಿಎಂ ಪರೋಕ್ಷ ಪರವಾನಗಿ ನೀಡಿದ್ದಾರೆ. ಸಮಾಜದಲ್ಲಿ ನಡೆಯುವ ‘ಆಕ್ಷನ್, ರಿಯಾಕ್ಷನ್’ಗಳಿಗೆ ಮೃದು ಧೋರಣೆಯಲ್ಲಿ ಮಾತನಾಡಿ ಗಲಭೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಬೊಮ್ಮಾಯಿ ಅವರು ಸಂವಿಧಾನದ ಆಶಯ ಕಾಪಾಡುತ್ತೇನೆ ಎಂದು ಪ್ರಮಾಣ ಸ್ವೀಕರಿಸಿದ್ದನ್ನು ಮರೆಯಬಾರದು ಎಂದು ಕರ್ನಾಟಕ ಕಾಂಗ್ರೆಸ್ ಒತ್ತಾಯಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಅಂದು – ಅನೈತಿಕ ಪೊಲೀಸ್ ಗಿರಿಯನ್ನು ಸಹಿಸುವುದಿಲ್ಲ. ಇಂದು – ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ. ಬೊಮ್ಮಾಯಿ ಅವರೇ, ಕಾನೂನು ಸುವ್ಯವಸ್ಥೆ ಕಾಪಾಡುವ ಇಚ್ಛೆಯೇ ನಿಮಗಿಲ್ಲ, ಇನ್ಯಾಕೆ ಪೊಲೀಸ್ ಇಲಾಖೆ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸ್ಥಾಪಿಸಲು ಮುಂದಾಗಿರುವುದು ಸ್ಪಷ್ಟ. ಸಂವಿಧಾನದ ಆಶಯಗಳನ್ನು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬದಲಿಗೆ ಸಮಾಜಘಾತುಕ ಶಕ್ತಿಗಳಿಗೆ ಬೆಂಬಲಿಸುತ್ತಿದ್ದಾರೆ. ದೇಶ ನಡೆಯುತ್ತಿರುವುದು ಭಾವನೆಗಳಲ್ಲಿ ಅಲ್ಲ, ಸಂವಿಧಾನದ ಆಧಾರದಲ್ಲಿ ಎಂಬುದನ್ನ ಸಿಎಂ ಬೊಮ್ಮಾಯಿ ಅವರು ನೆನಪಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮಾಡಿ, ರಾಜ್ಯದಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಗೊಂಡಾಗ ಉಂಟಾಗುವ ಕ್ರಿಯೆ-ಪ್ರತಿಕ್ರಿಯೆ ಎಂದು ಮುಖ್ಯಮಂತ್ರಿ ಕಾರಣ ಕೊಟ್ಟಿದ್ದಾರೆ. ಇಂತಹ ಕ್ರಿಯೆ-ಪ್ರತಿಕ್ರಿಯೆ ಕಾರಣಗಳನ್ನು ಕೊಟ್ಟೆ ಗುಜರಾತ್, ಉ.ಪ್ರ ರಾಜ್ಯಗಳಲ್ಲಿ ಕೋಮು ಗಲಭೆಗಳಾಗಿ ಜನ ಪ್ರಾಣ ತೆತ್ತಿದ್ದಾರೆ, ಸಮಾಜ ಶಾಂತಿ ಸೌಹಾರ್ದತೆ ಕಳೆದುಕೊಂಡಿದೆ ಎಂದು ತಿರುಗೇಟು ನೀಡಿದ್ದಾರೆ.