ನವದೆಹಲಿ: ಕಳ್ಳತನದ ಶಂಕೆಯಲ್ಲಿ ಚಾಲಕನೊಬ್ಬನನ್ನು ಹೊಡೆದು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕೃತ್ಯದ ನಂತರ ಶವವನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗಗನ್ ದೀಪ್ ಎಂಬಾತನೇ ಈ ಪ್ರಕರಣದ ಸಂತ್ರಸ್ತನಾಗಿದ್ದು, ಮೂಲತಃ ಇವರು ಕೆಲಸವಿಲ್ಲದ ಕಾರಣ ಮಾರುತಿ ವ್ಯಾನ್ ಚಾಲಕರಾಗಿ ದುಡಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಪ್ರತ್ಯಕ್ಷದರ್ಶಿಗಳು, ಚಂದರ್ ವಿಹಾರ್ ನ ಮುಖ್ಯ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ಮಾಹಿತಿ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಪರ್ವೀಂದರ್ ಸಿಂಗ್ ತಿಳಿಸಿದ್ದಾರೆ.
ಗಗನ್ ದೀಪ್ ಅವರ ಸೊಸೆ ನೀಡಿದ ದೂರಿನನ್ವಯ ದುಷ್ಕರ್ಮಿಗಳಾದ ಮುನ್ನ ಕುಮಾರ್, ಜಲಧರ್ ಕೇವತ್, ಶುಕ್ಕರ್ ಕೇವತ್, ಕಿಶನ್ ಯಾದವ್, ರಮೇಶ್ ಕುಮಾರ್ ಮತ್ತು ಕಮಲ್ ಕುಮಾರ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗಗಸ್ ದೀಪ್ ಅವರು ಗುಡಿಸಲಿಗೆ ನುಗ್ಗಿ ಮೊಬೈಲ್ ಫೋನ್ ಕದ್ದಿದ್ದಾರೆ ಎಂದು ಶಂಕಿಸಿ ಹಲ್ಲೆ ನಡೆಸಿ ಕೊಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದೆ.
ಹಲ್ಲೆ ನಡೆಸಿದ ನಂತರ ಹಗ್ಗದಿಂದ ಗಗನ್ ದೀಪ್ ಅವರ ಕುತ್ತಿಗೆ ಬಿಗಿದು ಕೊಲೆ ನಡೆಸಿದ್ದನ್ನು ದುಷ್ಕರ್ಮಿಗಳು ವಿಚಾರಣೆಯ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಮೃತದೇಹವನ್ನು ರಮೇಶ್ ಕುಮಾರ್ ಮತ್ತು ಕಮಲ್ ಕುಮಾರ್ ರಿಕ್ಷಾ ಬಳಸಿ ರಸ್ತೆ ಬದಿಗೆ ಎಸೆದು ಪರಾರಿಯಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.