Home ಕರಾವಳಿ ಮುಸ್ಲಿಮರು, ಪರಿಶಿಷ್ಟರಿಗೆ ದ್ರೋಹ ಎಸಗಿದ ಕಾಂಗ್ರೆಸ್: ಎಸ್‌ಡಿಪಿಐ

ಮುಸ್ಲಿಮರು, ಪರಿಶಿಷ್ಟರಿಗೆ ದ್ರೋಹ ಎಸಗಿದ ಕಾಂಗ್ರೆಸ್: ಎಸ್‌ಡಿಪಿಐ

ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಮುದಾಯದವರು, ಮುಸ್ಲಿಮರ ಮತಗಳ ಬಲದೊಂದಿಗೆ ಅಧಿಕಾರಕ್ಕೆ ಏರಿರುವ ಕಾಂಗ್ರೆಸ್‌, ಆ ಎರಡೂ ಸಮುದಾಯಗಳಿಗೆ ಅನ್ಯಾಯ ಮಾಡುವ ಮೂಲಕ ಮಾತೃದ್ರೋಹ ಮಾಡುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ ಪ್ರಸಾದ್, ಕಾಂಗ್ರೆಸ್‌ ತನ್ನ ಸಾಧನೆಗಳಿಂದ ಅಧಿಕಾರಕ್ಕೆ ಬಂದಿದ್ದಲ್ಲ, ಬಿಜೆಪಿಯ ಆಡಳಿತ ವೈಫಲ್ಯದಿಂದ ಅಧಿಕಾರ ಹಿಡಿದಿದೆ. ಕಳೆದ ಚುನಾವಣೆಯಲ್ಲಿ ಶೇ 67ರಷ್ಟು ದಲಿತ ಮತಗಳು, ಶೇ 92ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ದೊರೆತಿವೆ ಎಂದು ಹೇಳಿದ್ದಾರೆ.

ಆದರೆ, ಕಾಂಗ್ರೆಸ್‌ ಸರ್ಕಾರ ಮೀಸಲಾತಿ ಜಾರಿ ಸೇರಿದಂತೆ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಮುಸ್ಲಿಂ ಸಮುದಾಯಕ್ಕೆ ಶೇ. 8ರಷ್ಟು ಮೀಸಲಾತಿ ನೀಡಬೇಕು ಎಂಬ ಆಗ್ರಹಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಜಾಬ್ ವಿಷಯ ಪ್ರಸ್ತಾಪಿಸಿ, ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ. ಪ್ಯಾಲೆಸ್ತೀನ್ ಪರ ಪ್ರಧಾನಿ ಕೂಡ ಬೆಂಬಲ ಸೂಚಿಸಿದ್ದಾರೆ, ಆದರೆ, ಪ್ಯಾಲಸ್ತೀನ್ ಶಾಂತಿಗಾಗಿ ಪ್ರತಿಭಟನೆ ನಡೆಸಿದವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ತನ್ನ ಮಾನಸಿಕತೆಯನ್ನು ಪ್ರದರ್ಶಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರನ್ನು ಅವಮಾನಿಸಿ ಮಾತನಾಡಿದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ತೀರಾ ಅವಿವೇಕದಿಂದ ವರ್ತಿಸಿದೆ. ಕೋಮು ವಿವಾದ ಸೃಷ್ಟಿಸುವವರನ್ನು ನಿಯಂತ್ರಿಸುವ ತಾಕತ್ತು ಇಲ್ಲವೆಂದರೆ ಇವರು ಏನೆಂದು ಅರ್ಥವಾಗುತ್ತದೆ ಎಂದು ಭಾಸ್ಕರ್ ಪ್ರಸಾದ್ ಕಿಡಿಗಾರಿದ್ದಾರೆ.

ಪಕ್ಷದ ಮುಖಂಡರಾದ ಅನ್ವರ್ ಸಾದತ್, ಅಬೂಬಕರ್, ಜಮಾಲ್, ಅಶ್ರಫ್ ಉಪಸ್ಥಿತರಿದ್ದರು.

Join Whatsapp
Exit mobile version