Home ಟಾಪ್ ಸುದ್ದಿಗಳು ಸರಳ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ: ಆರ್. ಅಶೋಕ

ಸರಳ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ: ಆರ್. ಅಶೋಕ

ಬೆಂಗಳೂರು: ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸಲು ಷರತ್ತುಗಳಿಗೊಳಪಟ್ಟು ಅನುಮತಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.


ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್ 19 ಸ್ಥಿತಿಗತಿ ಕುರಿತು ಸಚಿವರು , ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ವಿವರ ನೀಡಿದ ಅವರು, ಗರಿಷ್ಠ 5 ದಿವಸಗಳ ವರೆಗೆ ಗಣೇಶ ಆಚರಣೆಗೆ ಅವಕಾಶ ನೀಡಲಾಗಿದೆ. ನಗರ ಪ್ರದೇಶದಲ್ಲಿ ವಾರ್ಡಿಗೆ ಒಂದು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಯಾವುದೇ ಸಾಂಸ್ಕೃತಿಕ , ಮನರಂಜನಾ ಕಾರ್ಯಕ್ರಮ ಇರುವುದಿಲ್ಲ , ಗಣೇಶೋತ್ಸವ ಸ್ಥಳದಲ್ಲಿ 50 X50 ಪೆಂಡಾಲ್ ನಲ್ಲಿ ಯಾವುದೇ ಸಮಯದಲ್ಲಿ ಗರಿಷ್ಠ 20 ಜನರಿಗೆ ಅವಕಾಶ ನೀಡಲಾಗಿದೆ. ಗಣೇಶ ವಿಸರ್ಜನೆಗೆ ಯಾವುದೆ ಮರವಣಿಗೆಗೆ ಅವಕಾಶವಿಲ್ಲ. ವಾಹನದಲ್ಲಿ ಸೀಮಿತ ಜನರಿಗೆ ಅವಕಾಶವಿದೆ ಎಂದರು.


ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಲಸಿಕೆ ಹಾಕಿಸಿಕೊಂಡಿರಬೇಕು. ಆಯಾ ಸ್ಥಳೀಯ ಸಂಸ್ಥೆಗಳು ಗಣೇಶೋತ್ಸವ ನಡೆದ ಪ್ರದೇಶದಲ್ಲಿ ಲಸಿಕೆ ಕಾರ್ಯಕ್ರಮವನ್ನು ತೀವ್ರಗೊಳಿಸಬೇಕು. ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಪ್ರತಿಷ್ಠಾಪನೆ ಮಾಡಬೇಕು. ಗಡಿ ಜಿಲ್ಲೆಗಳಲ್ಲಿ ಪ್ರಕರಣಗಳ ಪ್ರಮಾಣ ಗಮನಿಸಿ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಕಡಿಮೆ ಬಂದರೆ ಮಾತ್ರ ಅನುಮತಿ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಾಲೆಗಳಲ್ಲಿ ಗಣೇಶೋತ್ಸವ ನಡೆಸುವಂತಿಲ್ಲ ಎಂದು ಅವರು ಹೇಳಿದರು.

Join Whatsapp
Exit mobile version