ಮಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕ್ರಿಯೆಗೆ- ಪ್ರತಿಕ್ರಿಯೆ ಎಂದು ಹೇಳಿದ್ದೇ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ದ. ಕ ಜಿಲ್ಲೆ ಯಲ್ಲಿ ಕೋಮುವಾದವು ಈ ರೀತಿಯಾಗಿ ಬೆಳೆಯಲು ಕಾರಣವಾಗುತ್ತಿದೆ ಎಂದು ಎಸ್. ಡಿ. ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬ್ದುಲ್ ಜಲೀಲ್ ಹತ್ಯೆಯನ್ನು ಖಂಡಿಸಿ ದೇರಳಕಟ್ಟೆ ಜಂಕ್ಷನ್ ನಲ್ಲಿ ಎಸ್. ಡಿ. ಪಿ.ಐ ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಿನೇ ದಿನೇ ಜಿಲ್ಲೆಯಲ್ಲಿ ಕೋಮುವಾದದಿಂದ ಅಪರಾಧಗಳು ಹೆಚ್ಚುತ್ತಿರುವಾಗ ಪೊಲೀಸ್ ಇಲಾಖೆಯು ಅಪರಾಧಿಗಳಿಗೆ ಕಠಿಣ ಕಾಯ್ದೆಯನ್ವಯ ಬಂದಿಸದ ಕಾರಣ ಈ ರೀತಿ ಅಮಾಯಕರ ಕೊಲೆಗಳಾಗುತ್ತಿದೆ. ಸರಕಾರದ ತಾರತಮ್ಯ ನಿಲುವುಗಳು , ಸಂಘಪರಿವಾರದ ನಾಯಕರ ಪ್ರಚೋದನಕಾರಿ ಭಾಷಣಗಳು ಫ್ಯಾಸಿಸ್ಟ್ ಗೂಂಡಾಗಳಿಗೆ ಪ್ರೇರಣೆಯಾಗಿದೆ. ಹಿಂದುತ್ವ ಶಕ್ತಿಗಳ ಗೂಂಡಾ ಸಂಸ್ಕೃತಿಗೆ ಪೋಲಿಸ್ ಇಲಾಖೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಪ್ರಜ್ಞಾವಂತ ಜನತೆಯ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾದ ದಕ್ಷಿಣ ಕನ್ನಡ ಜಿಲ್ಲೆಯು ಮುಂದಿನ ದಿನಗಳಲ್ಲಿ ದುಷ್ಕರ್ಮಿಗಳ ತವರೂರು ಆಗಲಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇನ್ನೋರ್ವ ಅತಿಥಿ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲೆಯಲ್ಲಿ ಮತೀಯ ಶಕ್ತಿಗಳ ಅಟ್ಟಹಾಸ ಮಿತಿಮೀರುತ್ತಿದ್ದು ಜನಸಾಮಾನ್ಯರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಪ್ರತಿಯೊಂದು ಅಪರಾಧಕ್ಕೂ ಧರ್ಮದ ಲೇಬಲ್ ಅಂಟಿಸಿ ಸೆಕ್ಷನ್ ವಿಧಿಸುವ ಇಲಾಖೆಯ ಧೋರಣೆಗಳು ಬದಲಾಗಬೇಕು. ಮುಸ್ಲಿಂ ಯುವಕರ ಜೀವಗಳಿಗೆ ಹಾನಿಯಾದಾಗ ಅಪರಾಧಿಗಳ ವಿರುದ್ಧ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಕಾನೂನಿನ ಒತ್ತಡ ಅಲ್ಲದೆ ಇತರ ಒತ್ತಡಗಳಿಗೆ ಮಣಿಯದೆ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ , ಜಿಲ್ಲಾ ಸಮಿತಿ ಸದಸ್ಯ ನಾಸಿರ್ ಸಜಿಪ , ಮಂಗಳೂರು ಅಸೆಂಬ್ಲಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಸಜೀಪನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್. S.N , ಉಳ್ಳಾಲ ನಗರಸಭಾ ಸದಸ್ಯರಾದ ಅಸ್ಗರ್ ಅಲಿ, ರಮೀಝ್ , ಕ್ಷೇತ್ರ ಸಮಿತಿ ಕೋಶಾಧಿಕಾರಿ ಲತೀಫ್ ಕೋಡಿಜಾಲ್, ಕ್ಷೇತ್ರ ಸಮಿತಿ ಸದಸ್ಯ ನೌಶಾದ್ ಕಿನ್ಯ ಹಾಗೂ ಇತರ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.