Home ಕರಾವಳಿ ಪ್ರಚೋದನಾಕಾರಿ ಭಾಷಣ: ಚೈತ್ರಾ ವಿರುದ್ಧ ದೂರು

ಪ್ರಚೋದನಾಕಾರಿ ಭಾಷಣ: ಚೈತ್ರಾ ವಿರುದ್ಧ ದೂರು

ಮಂಗಳೂರು: ಸುರತ್ಕಲ್ ನಲ್ಲಿ ಬಜರಂಗದಳ ಮತ್ತು ದುರ್ಗಾವಾಹಿನಿಯ ಏರ್ಪಡಿಸಿದ್ದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಸುರತ್ಕಲ್ ಠಾಣೆಗೆ ದೂರು ನೀಡಲಾಗಿದೆ.

ಬೊಂಡಾಲ ಚಿತ್ತರಂಜನ್ ಶೆಟ್ಟಿ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಚೈತ್ರ ಕುಂದಾಪುರ ಅವರು ಅತ್ಯಂತ ಕೆಟ್ಟ ಪದ ಬಳಸಿ, ಸಾಮಾಜಿಕ ಸ್ವಾಸ್ಥ್ಯ ಕದಡುವ ದ್ವೇಷಪೂರಿತ ಮತ್ತು ಕರಾವಳಿಯ ಕೋಮುಭಾವನೆಗಳನ್ನು ಕೆರಳಿಸುವ ಭಾಷಣ ಮಾಡಿದ್ದಾರೆ. ಆಕೆ ಮತ್ತು ಸಂಘಟಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಭಾಷಣದಲ್ಲಿ ಒಂದು ಕೋಮಿನ ಜನರ ವಿರುದ್ಧ ಕಾನೂನುಬಾಹಿರ ಪದಗಳನ್ನು ಬಳಸಿ ಅವಮಾನಿಸಿರುವುದಲ್ಲದೆ, ಆ ಕೋಮಿನ ವಿರುದ್ಧ ಜನತೆಯನ್ನು ಎತ್ತಿಕಟ್ಟುವ ಮತ್ತು ದ್ವೇಷ ಹುಟ್ಟಿಸುವ ರೀತಿಯಲ್ಲಿ ಉದ್ರೇಕಕಾರಿಯಾಗಿ ಪದಗಳನ್ನು ಬಳಸಲಾಗಿದೆ. ಈಕೆಯ ಭಾಷಣದಿಂದ ಪ್ರಚೋದನೆಗೊಳಗಾಗಿ ಕ್ರಿಯೆ ಪ್ರಕ್ರಿಯೆಗಳು ಉ೦ಟಾಗುವ, ಕೋಮು ಘರ್ಷಣೆಯ ಭೀತಿ ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾದಗಳು ನಡೆಯುತ್ತಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭಾಷಣಕಾರ್ತಿ ಚೈತ್ರ ಹಾಗೂ ಕಾರ್ಯಕ್ರಮ ಸಂಯೋಜಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

Join Whatsapp
Exit mobile version