Home ಕರಾವಳಿ ಶಾಸಕ ಹರೀಶ್ ಪೂಂಜ ವಿರುದ್ಧ ದೂರು : ಕಠಿಣ ಕ್ರಮಕ್ಕೆ ಒತ್ತಾಯ

ಶಾಸಕ ಹರೀಶ್ ಪೂಂಜ ವಿರುದ್ಧ ದೂರು : ಕಠಿಣ ಕ್ರಮಕ್ಕೆ ಒತ್ತಾಯ

ಬೆಳ್ತಂಗಡಿ: ಓವರ್ ಟೇಕ್ ವಿಚಾರದಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೆಳ್ತಂಗಡಿ ಯೂತ್ ಕಾಂಗ್ರೆಸ್ ಮುಖಂಡರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ಗುರುವಾರ ರಾತ್ರಿ ಬೆಳ್ತಂಗಡಿ ಶಾಸಕ ಪೂಂಜ ಅವರ ಮೇಲೆ ತಲ್ವಾರ್ ನಿಂದ ದಾಳಿ ಮಾಡಲು ಪ್ರಯತ್ನಿಸಿದ್ದರು ಎಂದು ಶಾಸಕರ ಡ್ರೈವರ್ ಬಂಟ್ವಾಳ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ತನಿಖೆ ಆರಂಭಿಸಿದಾಗ ಇದೊಂದು ಓವರ್ ಟೇಕ್ ವಿಚಾರದಲ್ಲಿ ನಡೆದ ಕಿರಿಕ್ ಎಂದು ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಮ್ಮ ವಾಹನವನ್ನು ಓವರ್ ಟೇಕ್ ಮಾಡಿರುವುದನ್ನು ತಿರುಚಿ ಶಾಸಕ ಹರೀಶ್ ಪೂಂಜ ಅವರು ಕೋಮುಬಣ್ಣ ನೀಡಿದ್ದರು. ನಾನು ಹಿಂದುತ್ವಕ್ಕಾಗಿ ದುಡಿಯುತ್ತಿರುವುದರಿಂದ ಜಿಹಾದಿಗಳು ನನ್ನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂಬ ಕಟ್ಟುಕಥೆಯನ್ನು ಸೃಷ್ಟಿಸಿ ಜಿಲ್ಲೆಯಲ್ಲಿ ಗೊಂದಲ, ಅಶಾಂತಿಯನ್ನು ಹರಡಲು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಬೆಳ್ತಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ದೂರಿನಲ್ಲಿ ಆಗ್ರಹಿಸಿದ್ದಾರೆ.

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಭಿನಂದನ್ ಹರೀಶ್ ಕುಮಾರ್, ಅಶ್ವಥ್ ರಾಜ್ ಕಲ್ಲಾಜೆ, ಅಭಿದೇವ್ ಅರಿಗ ಧರ್ಮಸ್ಥಳ, ಯುವ ಇಂಟೆಕ್ ಅಧ್ಯಕ್ಷ ನವೀನ್ ಗೌಡ ಸವಣಾಲು, ಯುವ ಮುಖಂಡರಾದ ಸುಧೀರ್ ದೇವಾಡಿಗ ಬೆಳ್ತಂಗಡಿ, ಗಣೇಶ್ ಕಣಿಯೂರು ಎಂಬಿತ್ಯಾದಿ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Join Whatsapp
Exit mobile version