Home ಟಾಪ್ ಸುದ್ದಿಗಳು ಜಾರಕಿಹೊಳಿ ರಾಸಲೀಲೆ; ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಸಂತ್ರಸ್ತೆ

ಜಾರಕಿಹೊಳಿ ರಾಸಲೀಲೆ; ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಸಂತ್ರಸ್ತೆ

ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ರಾಸಲೀಲೆ ವೀಡಿಯೋ ಬಹಿರಂಗಗೊಂಡಿದ್ದು, ಸಂತ್ರಸ್ತೆ ಪರ ಮಾಹಿತಿ ಹಕ್ಕು ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ದೂರನ್ನು ಕಬ್ಬನ್ ಪಾರ್ಕ್ ಠಾಣೆಗೆ ವರ್ಗಾಯಿಸಲಾಗಿದೆ.

ದೂರು ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದೇವೆ. ನಮ್ಮ  ದೂರನ್ನು ಪರಿಶೀಲನೆ ಮಾಡಿ ಪ್ರಕರಣವನ್ನು ಕಬ್ಬನ್ ಪಾರ್ಕ್ ಠಾಣೆಗೆ ಕಳಿಸಿದ್ದಾರೆ. ಅಲ್ಲಿ ಮತ್ತೆ ದೂರು ನೀಡಲಿದ್ದೇನೆ ಎಂದರು.

ಇದು ಸೂಕ್ಷ್ಮ ವಿಚಾರ, ಮಹಿಳೆಯ ವಿವರ ಬಹಿರಂಗ ಮಾಡಲು‌ ಸಾಧ್ಯವಿಲ್ಲ, ಅವರ ಕುಟುಂಬ ಸದಸ್ಯರು ನನ್ನನ್ನು ಸಂಪರ್ಕಿಸಿದ್ದಾರೆ, ಅವರು ಹೋರಾಟ ಮಾಡಲು ಶಕ್ತರಲ್ಲ ಹಾಗಾಗಿ ನನ್ನ ನೆರವು ಕೋರಿದ್ದಾರೆ. ಅವರ ಕಟುಂಬ ಸದಸ್ಯರು ನಿನ್ನೆ ಸಿಡಿ ಕೊಟ್ಟಿದ್ದಾರೆ, ಸರ್ಕಾರಿ ಉದ್ಯೋಗ‌ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ,ನ್ಯಾಯ ಕೊಡಸಿ ಎಂದು ಕೇಳಿದ್ದರು, ನಮ್ಮ ವಕೀಲರ‌ ಜೊತೆ ಚರ್ಚಿಸಿ ಸಿಡಿ, ದಾಖಲೆ ಇರಿಸಿಕೊಂಡು ಸತ್ಯಾಸತ್ಯತೆ ಗೊತ್ತಾಗಲಿ, ತನಿಖೆಯಾಗಲಿ ಎಂದು ದೂರು ನೀಡಿದ್ದೇನೆ ಎಂದರು.

ದೂರಿನಲ್ಲೇನಿದೆ?

ಹಾಲಿ ಸಚಿವ ರಮೇಶ್ ಜಾರಕಿಹೊಳಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಉತ್ತರ ಕರ್ನಾಟಕದ ಯುವತಿಯೊಬ್ಬರು ಆರ್.ಟಿ ನಗರದಲ್ಲಿ ವಾಸವಿದ್ದು, ಕಿರುಚಿತ್ರ ನಿರ್ಮಾಣಕ್ಕೆ ಬಂದಾಗ ಕೆಪಿಟಿಸಿಎಲ್ ನಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ನಂತರ ಉದ್ಯೋಗವೂ ನೀಡದೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರ ವೀಡಿಯೋ ಇದೆ ಎಂದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಹಾಗಾಗಿ ಪ್ರಕರಣದ ತನಿಖೆ ನಡೆಸಬೇಕು ಹಾಗು ಸಂತ್ರಸ್ತೆ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

Join Whatsapp
Exit mobile version