Home ಟಾಪ್ ಸುದ್ದಿಗಳು ದ್ವೇಷ ಭಾಷಣ | ಹಿಂದೂ ಮಹಾಸಭಾ ಮುಖಂಡೆ ಸಾಧ್ವಿ ಅನ್ನಪೂರ್ಣ ವಿರುದ್ಧ ಎಫ್.ಐ.ಆರ್

ದ್ವೇಷ ಭಾಷಣ | ಹಿಂದೂ ಮಹಾಸಭಾ ಮುಖಂಡೆ ಸಾಧ್ವಿ ಅನ್ನಪೂರ್ಣ ವಿರುದ್ಧ ಎಫ್.ಐ.ಆರ್

ಲಖನೌ: ಅಲಿಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿ ಅವಹೇಳನಕಾರಿ ಹೇಳಿಕೆ ನೀಡಿದ ಬಲಪಂಥೀಯ ಮುಖಂಡೆ ಸಾಧ್ವಿ ಅನ್ನಪೂರ್ಣ ವಿರುದ್ಧ ಗಾಂಧಿಪಾರ್ಕ್ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

ಸದ್ಯ ಸ್ವಯಂ ಘೋಷಿತ ಅಖಿಲ ಭಾರತ ಹಿಂದೂ ಮಹಾಸಭಾ, ಇದರ ರಾಷ್ಟ್ರೀಯ ಕಾರ್ಯದರ್ಶಿ ಸಾಧ್ವಿ ಅನ್ನಪೂರ್ಣ ಯಾನೆ ಪೂಜಾ ಶಕುನ್ ಪಾಂಡೆ ವಿರುದ್ಧ ಪ್ರಕರಣ ದಾಖಲಾಗಿದೆ.

ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತಿ ಪಡೆದ ಪೂಜಾ ಶಕುನ್ ಪಾಂಡೆ ಅವರನ್ನು ಕಳೆದ ವರ್ಷಗಳಲ್ಲಿ 2 ಸಲ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು ಇದೀಗ ಮತ್ತೆ ದ್ವೇಷ ಕಾರುವ ಹೇಳಿಕೆಯನ್ನು ನೀಡಿದ್ದಾರೆ.

ಪ್ರಸ್ತುತ ಆಕೆಯ ಮೇಲೆ ಐಪಿಸಿ ಸೆಕ್ಷನ್ 153A/153B/295A/298/505 ರ ಅಡಿಯಲ್ಲಿ ಗಾಂಧಿಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಲಿಗಢ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ ತಿಳಿಸಿದ್ದಾರೆ.

ಕಳೆದ ವರ್ಷ ಉತ್ತರಾಖಂಡದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಪೂಜಾ ಪಾಂಡೆ ಮತ್ತು ಇನ್ನಿತರ ಸಂಘಪರಿವಾರದ ಮುಖಂಡರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. 2019 ರಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಮೇಲೆ ಗುಂಡು ಹಾರಿಸಿದ್ದು ಇದೇ ಪೂಜಾ ಪಾಂಡೆ. ಅಲ್ಲದೆ ಇನ್ನೊಂದು ಕಾರ್ಯಕ್ರಮದಲ್ಲಿ ನಾಥುರಾಮ್ ಗೋಡ್ಸೆಯನ್ನು ಪ್ರಶಂಸಿಸಿ ವಿವಾದದ ಕೇಂದ್ರಬಿಂದುವಾಗಿದ್ದರು.

Join Whatsapp
Exit mobile version