Home ಕರಾವಳಿ ಉಡುಪಿ ಹಿಜಾಬ್ ಸಂಘರ್ಷ: ವಿಳಾಸ, ಮೊಬೈಲ್ ಸಂಖ್ಯೆ ಸೋರಿಕೆ; ಸಂತ್ರಸ್ತ ಮುಸ್ಲಿಮ್ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಉಡುಪಿ ಹಿಜಾಬ್ ಸಂಘರ್ಷ: ವಿಳಾಸ, ಮೊಬೈಲ್ ಸಂಖ್ಯೆ ಸೋರಿಕೆ; ಸಂತ್ರಸ್ತ ಮುಸ್ಲಿಮ್ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಉಡುಪಿ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಮ್ ವಿದ್ಯಾರ್ಥಿನಿಗಳು ಕಾಲೇಜಿನಿಂದ ತಮ್ಮ ವಿಳಾಸ, ಮೊಬೈಲ್ ಸಂಖ್ಯೆ ಸೋರಿಕೆ ಆಗಿದೆ ಎಂದು ಆರೋಪಿಸಿದ್ದು, ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರ ಪ್ರತಿಭಟನೆಯ ಕೇಂದ್ರಬಿಂದುಗಳಲ್ಲಿ ಒಬ್ಬರಾದ ಆಲಿಯಾ ಅಸ್ಸಾದಿ ಅವರ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಪೋಷಕರ ವಿವರ ಮತ್ತು ವಿಳಾಸವನ್ನು ಒಳಗೊಂಡಂತೆ ಹಲವು ವಿಚಾರಗಳನ್ನು ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಆಲಿಯಾ ಅಸ್ಸಾದಿ, ಇದರಿಂದಾಗಿ ಸಾರ್ವಜನಿಕವಾಗಿ ಓಡಾಡಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ವಿವರ ಮತ್ತು ವಿಳಾಸದ ಬಗ್ಗೆ ಎಲ್ಲರಿಗೂ ತಿಳಿಸಲಾಗಿದೆ ಮತ್ತು ನನ್ನನ್ನು ಗುರಿಯಾಗಿಸುವ ಸಾಧ್ಯತೆಯಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ನನ್ನ ಹೆತ್ತವರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದು, ಕರೆಗಳಿಗೆ ಉತ್ತರಿಸದಂತೆ ಹೆತ್ತವರಿಗೆ ಸೂಚಿಸಿದ್ದೇನೆ ಎಂದು ಮತ್ತೊಬ್ಬ ಸಂತ್ರಸ್ತೆ ವಿದ್ಯಾರ್ಥಿನಿ ಹಾಝರ ಶಿಫಾ ತಿಳಿಸಿದ್ದಾರೆ.

ಈ ಮಧ್ಯೆ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನಿಂದ ಸುಪ್ರೀಮ್ ಕೋರ್ಟ್ ಗೆ ಅರ್ಜಿಯನ್ನು ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಲು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ.

Join Whatsapp
Exit mobile version