ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ನಿಧನರಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಬೆಳಗ್ಗೆ ಜಿಮ್ ಗೆ ಹೋಗಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ನಾಗರಭಾವಿ ಯುನಿಟಿ ಲೈಫ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ನಿಧನರಾಗಿದ್ದಾರೆ.
ಬೊಮ್ಮಾಯಿ ಗೃಹ ಸಚಿವರಾದಾಗಿಂದ ಮಾಧ್ಯಮ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಗುರುಲಿಂಗ ಸ್ವಾಮಿ ಅವರು, ಬೊಮ್ಮಾಯಿ ಸಿಎಂ ಆದ ಬಳಿಕ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡಿದ್ದರು.
ವಿಜಯ ಕರ್ನಾಟಕ, ಕನ್ನಡ ಪ್ರಭ, ವಿಜಯವಾಣಿ, ಟಿವಿ 5, ಈಟಿವಿ ಸೇರಿದಂತೆ ಹಲವು ಪತ್ರಿಕೆ, ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದರು.
ಅವರು ಪತ್ನಿ ದೀಪಾ ಹೊಳಿಮಠ್ ಹಾಗೂ ಅನನ್ಯ ಮತ್ತು ದಿತ್ಯಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತಾಪ ಸೂಚಿಸಿದ್ದಾರೆ.