Home ಟಾಪ್ ಸುದ್ದಿಗಳು ಪ್ರತಿಭಟನಾನಿರತ ವಕೀಲರನ್ನು ಭೇಟಿಯಾದ ಸಿಜೆಐ ಚಂದ್ರಚೂಡ್

ಪ್ರತಿಭಟನಾನಿರತ ವಕೀಲರನ್ನು ಭೇಟಿಯಾದ ಸಿಜೆಐ ಚಂದ್ರಚೂಡ್

ನವದೆಹಲಿ: ಉಚ್ಚ ನ್ಯಾಯಾಲಯಗಳಿಂದ ತಲಾ ಒಬ್ಬರು ನ್ಯಾಯಾಧೀಶರನ್ನು ವರ್ಗಾವಣೆ ಮಾಡುವ ಕೊಲಿಜಿಯಂ ನಿರ್ಣಯವನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ತೆಲಂಗಾಣ ಮತ್ತು ಗುಜರಾತ್’ನ ವಕೀಲರನ್ನು ಸಿಜೆಐ ಧನಂಜಯ ವೈ. ಚಂದ್ರಚೂಡ್ ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಭೇಟಿಯ ವೇಳೆ ಸಿಜೆಐ ಅವರಲ್ಲದೆ ಸರ್ವೋಚ್ಚ ನ್ಯಾಯಾಲಯದ ಇನ್ನಿಬ್ಬರು ಹಿರಿಯ ಜಸ್ಟಿಸ್ ಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ. ಆರ್. ಶಾ ಅವರ ಜೊತೆಗಿದ್ದರು. ಜಿಎಚ್ ಸಿಎಎ- ಗುಜರಾತ್ ಹೈಕೋರ್ಟ್ ಎಡ್ವಕೇಟ್ಸ್ ಅಸೋಸಿಯೇಶನ್ ಮತ್ತು ಟಿಎಚ್ ಸಿಎಎ- ತೆಲಂಗಾಣ ಹೈ ಕೋರ್ಟ್ ಎಡ್ವಕೇಟ್ಸ್ ಅಸೋಸಿಯೇಶನ್ ನವರ ಜೊತೆ ಈ ಮಾತುಕತೆ ನಡೆಯಿತು.

ಮಾತುಕತೆಯ ಬಳಿಕ ತೆಲಂಗಾಣದ ವಕೀಲರು ಪ್ರತಿಭಟನೆ ಹಿಂದೆಗೆದುಕೊಳ್ಳಲು ನಿರ್ಧರಿಸಿದರು. ಆದರೆ ಗುಜರಾತ್ ವಕೀಲರು ಈ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಹೇಳಲಿಲ್ಲ.

”ಉಚ್ಚ ನ್ಯಾಯಾಲಯದ ಜಡ್ಜ್’ಗಳ ವರ್ಗಾವಣೆ ವಿಷಯದಲ್ಲಿ ನಾವು ಪ್ರತಿಭಟನೆ ನಡೆಸಿದ್ದೆವು. ಗೌರವಾರ್ಹ ಸಿಜೆಐ ಚಂದ್ರಚೂಡರ ಜೊತೆಗೆ ಮಾತನಾಡಿದ ಮೇಲೆ ನಾವು ಈ ವಿಷಯದಲ್ಲಿ ಪ್ರತಿಭಟನೆಯನ್ನು ಇಲ್ಲಿಗೇ ಕೈಬಿಡಲು ತೀರ್ಮಾನಿಸಿದ್ದೇವೆ.” ಎಂದು ಟಿಎಚ್ ಸಿಎಎ ಉಪಾಧ್ಯಕ್ಷ ಪಿ. ಕೃಷ್ಣಾ ರೆಡ್ಡಿ ಹೇಳಿದರು.

ಇದೇ ವೇಳೆ ಸೋಮವಾರ ಸಂಜೆ ಸುಪ್ರೀಂ ಕೋರ್ಟಿನ ಕೊಲಿಜಿಯಂ ಗುಜರಾತಿನ ಹೈಕೋರ್ಟ್ ಇನ್ನೊಬ್ಬ ಜಡ್ಜ್ ವಿಪುಲ್ ಮನುಭಾಯಿ ಪಾಂಚೋಲಿಯವರನ್ನು ಪಾಟ್ನಾ ಹೈಕೋರ್ಟಿಗೆ ವರ್ಗ ಮಾಡಿತು. ಆ ತೀರ್ಮಾನ ಆಗುವಾಗ ಇನ್ನೂ ಕೊಲಿಜಿಯಂ ಮುಖ್ಯಸ್ಥರಾಗಿ ಹಿಂದಿನ ಸಿಜೆಐ ಯು. ಯು. ಲಲಿತ್ ಇದ್ದರು. 

“ಪ್ರತಿಭಟನೆ ಕೊನೆಗೊಳಿಸಲು ನಮ್ಮ ಕೂಟವು ಇಂದು ಸಭೆ ನಡೆಸುತ್ತಿದೆ. ಆದರೆ ಗುಜರಾತ್ ಹೈಕೋರ್ಟಿನಿಂದ ಇನ್ನೊಬ್ಬ ಜಡ್ಜ್ ರನ್ನು ವರ್ಗಾವಣೆ ಮಾಡುವ ಸುತ್ತೋಲೆ ಹೊರಟಿದೆ. ನಾವು ಅದನ್ನೂ ಚರ್ಚಿಸಲಿದ್ದೇವೆ” ಎಂದು ಜಿಎಚ್ ಸಿಎಎ ಕಾರ್ಯದರ್ಶಿ ಹಾರ್ದಿಕ್ ಬ್ರಹ್ಮಭಟ್ ಹೇಳಿದರು.

ಸಿಜೆಐ ಆದ ಮೇಲೆ ಜಸ್ಟಿಸ್ ಚಂದ್ರಚೂಡ್ ಅವರು ನವೆಂಬರ್ 16ರಂದು ತನ್ನ ಅಧ್ಯಕ್ಷತೆಯಲ್ಲಿ ಮೊದಲ ಕೊಲಿಜಿಯಂ ಸಭೆ ನಡೆಸಿದರು. ಅದರಲ್ಲಿ ಮೂವರು ಹೈಕೋರ್ಟ್ ಜಡ್ಜ್ ಗಳ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಮದರಾಸು, ಗುಜರಾತ್, ತೆಲಂಗಾಣ ಉಚ್ಚ ನ್ಯಾಯಾಲಯಗಳಿಂದ ತಲಾ ಒಬ್ಬರನ್ನು ವರ್ಗಾಯಿಸುವ ತೀರ್ಮಾನವಾಗಿತ್ತು.

ಮದರಾಸು ಹೈಕೋರ್ಟಿನ ಹಂಗಾಮಿ ಮುಖ್ಯಮೂರ್ತಿ ಟಿ. ರಾಜಾ ಅವರನ್ನು ರಾಜಸ್ತಾನ ಹೈಕೋರ್ಟಿಗೆ ಮತ್ತು ತೆಲಂಗಾಣ ಹೈಕೋರ್ಟಿನ ಜಸ್ಟಿಸ್ ಅಭಿಷೇಕ್ ರೆಡ್ಡಿ, ಗುಜರಾತ್ ಹೈಕೋರ್ಟಿನ ನ್ಯಾಯಾಧೀಶ ನಿಖಿಲ್ ಎಸ್. ಖರೇಲ್ ಅವರನ್ನು ಪಾಟ್ನಾ ಹೈಕೋರ್ಟಿಗೆ ವರ್ಗಾಯಿಸುವ ತೀರ್ಮಾನವಾಗಿದೆ.

ಆದರೆ ಗುಜರಾತ್ ಮತ್ತು ತೆಲಂಗಾಣ ಹೈಕೋರ್ಟ್ ವಕೀಲರು ಅದನ್ನು ಪ್ರತಿಭಟಿಸಿ ನ್ಯಾಯಾಲಯ ಕಲಾಪಗಳಿಗೆ ಬಹಿಷ್ಕಾರ ಹಾಕಿದ್ದರು.

ಸುಪ್ರೀಂ ಕೋರ್ಟ್ ಕೊಲಿಜಿಯಂ ರಾಷ್ಟ್ರೀಯ ದೃಷ್ಟಿಕೋನದಿಂದ ತೀರ್ಮಾನ ತೆಗೆದುಕೊಳ್ಳುತ್ತದೆ.  ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು ಕೋರ್ಟಿಗೆ ಬಹಿಷ್ಕಾರ ಹಾಕಿದರೆ ಕಕ್ಷಿಕದಾರರು ತೊಂದರೆಗೊಳಗಾಗುತ್ತಾರೆ ಎಂದು ಸಿಜೆಐ ಶನಿವಾರವೇ ಹೇಳಿದ್ದರು.

ಬಿಸಿಐ- ಭಾರತೀಯ ಬಾರ್ ಕೌನ್ಸಿಲ್ ನಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್, “ಬಾರ್’ ನ ಪ್ರತಿಯೊಬ್ಬ ಸದಸ್ಯರೂ ತಿಳಿದಿರಬೇಕಾದ ಸತ್ಯವೇನೆಂದರೆ ನಾವು ಆಡಳಿತಾತ್ಮಕವಾಗಿ ದೇಶ ಹಿತದ ದೃಷ್ಟಿಕೋನದಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅದು ನಮ್ಮ ಜವಾಬ್ದಾರಿ. ನೀವು ಜವಾಬ್ದಾರಿಯಲ್ಲಿರುವವರನ್ನು ನಂಬಬೇಕಾಗುತ್ತದೆ. ಇವೆಲ್ಲ ಕಠಿಣ ತೀರ್ಮಾನಗಳಾದ್ದರಿಂದ ಇಲ್ಲಿ ಕೋರ್ಟು ಮೆಟ್ಟಿಲು ಹತ್ತುವವರ ಹಿತ ರಕ್ಷಣೆಯೇ ಮುಖ್ಯ” ಎಂದು ಹೇಳಿದರು.

“ವಕೀಲರು ಹರತಾಳ ಮಾಡಿದರೆ ತೊಂದರೆಗೀಡಾಗುವವರು ಯಾರು? ನಾವು ನ್ಯಾಯಾಧೀಶರು, ನೀವು ವಕೀಲರು ಎಲ್ಲರು ಕೋರ್ಟಿಗೆ ನ್ಯಾಯ ಕೇಳಿ ಬರುವವರಿಗಾಗಿ ಇರುವವರು. ಅದನ್ನು ಅರಿತಿರಬೇಕು. ಕೋರ್ಟ್ ಗ್ರಾಹಕರಿಗೆ ತೊಂದರೆ ಎಂದರೆ ಗ್ರಾಹಕ ನ್ಯಾಯಕ್ಕೆ ಹಾನಿ ಎಂಬುದನ್ನು ವಕೀಲರು ತಿಳಿದಿರಬೇಕು” ಎಂದೂ ಸಿಜೆಐ ಚಂದ್ರಚೂಡ್ ತಿಳಿಸಿದರು.

Join Whatsapp
Exit mobile version