ಹೊಸದಿಲ್ಲಿ : ಭಾರತಕ್ಕೆ ಉತ್ತಮ ಮಹಿಳಾ ಮುಖ್ಯ ನ್ಯಾಯಮೂರ್ತಿಯ ಅವಶ್ಯಕತೆಯಿದೆ ಎಂದು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಹೇಳಿದ್ದಾರೆ. ಮಹಿಳಾ ವಕೀಲರ ಸಂಘದ ಸದಸ್ಯರಾದ ಸ್ನೇಹಾ ಖಲಿತಾ ಮತ್ತು ಶೋಭಾ ಗುಪ್ತಾ ಅವರು ಇನ್ನೂ ಹೆಚ್ಚಿನ ಮಹಿಳಾ ನ್ಯಾಯಾಧೀಶೆಯರನ್ನು ನೇಮಿಸುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸುತ್ತಾ ಮುಖ್ಯ ನ್ಯಾಯಮೂರ್ತಿಗಳು ಈ ಹೇಳಿಕೆ ನೀಡಿದ್ದಾರೆ.
‘ಶೇಕಡಾ 11 ರಷ್ಟು ಮಹಿಳೆಯರು ಮಾತ್ರ ನ್ಯಾಯಾಂಗದಲ್ಲಿದ್ದಾರೆ. ಹೆಚ್ಚಿನ ಮಹಿಳಾ ನ್ಯಾಯಾಧೀಶೆಯರನ್ನು ನೇಮಿಸಬೇಕೆಂಬ ಯೋಜನೆ ನಮಗೆ ಇದೆ. ನಾವು ಅದನ್ನು ಚೆನ್ನಾಗಿ ಕಾರ್ಯಗತಗೊಳಿಸುತ್ತಿದ್ದೇವೆ. ನಾವು ಒಳ್ಳೆಯ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಲು ಅನೇಕ ಮಹಿಳೆಯರನ್ನು ಆಹ್ವಾನಿಸಲಾಗಿದೆ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಆದರೆ ಮಹಿಳೆಯರು ಆಹ್ವಾನವನ್ನು ನಿರಾಕರಿಸಿದ್ದಾರೆ. ಅವರೆಲ್ಲ ಮಕ್ಕಳ ಶಿಕ್ಷಣ ಮತ್ತು ಮನೆಯ ಜವಾಬ್ದಾರಿಗಳ ಹೆಸರಿನಲ್ಲಿ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಬೊಬ್ಡೆ ಹೇಳಿದರು.
ದೇಶದ 25 ಹೈಕೋರ್ಟ್‌ಗಳ ಪೈಕಿ ತೆಲಂಗಾಣ ಹೈಕೋರ್ಟ್‌ನಲ್ಲಿ ಮಹಿಳಾ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಒಬ್ಬರು ಇದ್ದಾರೆ. ದೇಶದ 661 ಹೈಕೋರ್ಟ್ ನ್ಯಾಯಾಧೀಶರಲ್ಲಿ ಕೇವಲ 73 ಮಂದಿ ಮಹಿಳೆಯರಾಗಿದ್ದಾರೆ. ಮಣಿಪುರ, ಮೇಘಾಲಯ, ಪಾಟ್ನಾ, ತ್ರಿಪುರ ಮತ್ತು ಉತ್ತರಾಖಂಡದಲ್ಲಿ ಮಹಿಳಾ ನ್ಯಾಯಾಧೀಶರೇ ಇಲ್ಲ ಎಂದು ವರದಿಯಾಗಿದೆ.